ಭಾರತದ ಸಂವಿಧಾನ ಅಂಗೀಕೃತಗೊಂಡು ನಾಳೆಗೆ ಜನವರಿ (26) 74 ವರ್ಷಗಳು. ಭವ್ಯ ಗಣರಾಜ್ಯೋತ್ಸವ ಪರೇಡ್, ವಿದೇಶದಿಂದ ಗಣ್ಯರ ಆಗಮನ ರಾಷ್ಟ್ರಪತಿಗಳ ಭಾಷಣ ಮಾತ್ರವಲ್ಲದೆ ಈ ದಿನದ ವಿಶೇಷತೆಯ ಬಗ್ಗೆ ಹತ್ತು ಹಲವಾರು ನೀವು ತಿಳಿದಿರಬೇಕಾದ ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ.
ಜನಗಣಮನ ರಾಷ್ಟ್ರಗೀತೆಯಾದುದು
ಸಂವಿಧಾನ ಸಭೆಯು 1950ರ
ಜ.24ರಂದು ರವೀಂದ್ರನಾಥ ಟಾಗೋರ್ ವಿರಚಿತ 'ಜನಗಣಮನ ಅಧಿನಾಯಕ ಜಯ ಹೇ' ಪದ್ಯವನ್ನು
ನಮ್ಮ ರಾಷ್ಟ್ರಗೀತೆ ಎಂದು ಅಂಗೀಕರಿಸಿತು. ಸಂವಿಧಾನ ಸಭೆಯ ಅಧ್ಯಕ್ಷ ಡಾ.ರಾಜೇಂದ್ರ
ಪ್ರಸಾದರು ಇದನ್ನು ಘೋಷಿಸಿದರು. ಇದರ ಜೊತೆಗೇ, ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ
ಪಾತ್ರ ವಹಿಸಿದ್ದ ಬಂಕಿಮಚಂದ್ರ ಚಟರ್ಜಿ ವಿರಚಿತ 'ವಂದೇ ಮಾತರಂ' ಗೀತೆಯನ್ನು
'ರಾಷ್ಟ್ರೀಯ ಹಾಡು' ಎಂದು ಕರೆದು ಅದಕ್ಕೂ 'ಜನಗಣಮನ'ದ ಸಮಾನ ಸ್ಥಾನಮಾನ ನೀಡಲಾಯಿತು.
'ಜನಗಣಮನ'ವನ್ನು ಟಾಗೋರ್ ಐದು ಚರಣಗಳಲ್ಲಿ ಬರೆದಿದ್ದರು. 'ಭಾರತ ಭಾಗ್ಯ ವಿಧಾತ'ನನ್ನು
ಸ್ತುತಿಸುವ ಗೀತೆಯಿದು. ದೇಶದ ಎಲ್ಲ ವೈವಿಧ್ಯಗಳನ್ನು, ಹಿರಿಮೆಗಳನ್ನು ಇದು
ಕೀರ್ತಿಸುತ್ತದೆ. ಇದನ್ನು ಸಾರ್ವಜನಿಕವಾಗಿ ಮೊದಲು ಹಾಡಿದ್ದು ಕಲ್ಕತ್ತಾದಲ್ಲಿ 1911ರ
ಡಿಸೆಂಬರ್ 27ರಂದು ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ. ಆಗ ಅದು ಒಂದು ದೇಶಭಕ್ತಿ
ಗೀತೆಯಾಗಿತ್ತು. ಕೆಲವೇ ತಿಂಗಳಲ್ಲಿ, ಟಾಗೋರ್ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ
'ತತ್ವಬೋಧಿನಿ ಪತ್ರಿಕಾ'ದಲ್ಲಿಅದು ಪ್ರಕಟವಾಯಿತು.
1947ರಲ್ಲಿ ದೇಶ ಸ್ವತಂತ್ರವಾದಾಗ, ದೇಶಕ್ಕೊಂದು ರಾಷ್ಟ್ರಗೀತೆ ಬೇಕೆಂಬ ಒತ್ತಡ ಹಲವು ಕಡೆಗಳಿಂದ ಬಂತು. ಅದೇ ವರ್ಷ ವಿಶ್ವಸಂಸ್ಥೆಯಲ್ಲಿ ಜನಗಣಮನವನ್ನು ಹಾಡಲಾಯಿತು. ಇದರ ವಿನ್ಯಾಸ, ಲಯ, ಘನತೆಗಳಿಂದ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಪ್ರಭಾವಿತರಾದರು. ಅಂತಾರಾಷ್ಟ್ರೀಯ ಆರ್ಕೆಸ್ಟ್ರಾಗಳಲ್ಲಿ ಕೂಡ ನುಡಿಸಬಹುದಾದ ಇದರ ಜಾಗತಿಕ ಲಯವಿನ್ಯಾಸವೇ ಇದರ ಪರವಾಗಿ ನಿಂತಿತು ಎನ್ನಬೇಕು.
ವಿಶೇಷ ಅತಿಥಿಗಳು!
ದಿಲ್ಲಿಯ ರಾಜಪಥದಲ್ಲಿ ನಡೆಯುವ
ಗಣರಾಜ್ಯ ದಿನದ ಪರೇಡ್ ವೀಕ್ಷಿಸಲು ಕೆಲವೊಮ್ಮೆ ಅನ್ಯದೇಶಗಳ ನಾಯಕರನ್ನು
ಆಹ್ವಾನಿಸಲಾಗುತ್ತದೆ. ಹೀಗೆ ಹಲವಾರು ದೊಡ್ಡ ನಾಯಕರು ಆಗಮಿಸಿ ಪರೇಡ್ ವೀಕ್ಷಿಸಿ
ಶ್ಲಾಘಿಸಿದ್ದಾರೆ. ಮೊದಲ ಗಣರಾಜ್ಯ ದಿನದ ಮೆರವಣಿಗೆಗೆ ಹೀಗೆ ಆಗಮಿಸಿದವರು ಆಗಿನ
ಇಂಡೋನೇಷ್ಯಾದ ಪ್ರೆಸಿಡೆಂಟ್ ಸುಕಾರ್ನೊ. ಅವರು ಸ್ವತಂತ್ರ ಇಂಡೋನೇಷ್ಯಾದ ಪ್ರಥಮ
ಅಧ್ಯಕ್ಷ, ಅಲ್ಲಿನ ಸ್ವಾತಂತ್ರ್ಯ ಚಳವಳಿಯ ಮುಖಂಡ, ಭಾರತದ ಮಿತ್ರ, ಭಾರತ ಅಳವಡಿಸಿಕೊಂಡ
ಅಲಿಪ್ತ ನೀತಿಯ ಸಹಭಾಗಿ ಆಗಿದ್ದರು.
ಬ್ರಿಟಿಷ್ ರಾಜ ದಂಪತಿ ಎರಡು ವರ್ಷ
ಪ್ರತ್ಯೇಕವಾಗಿ ಆಗಮಿಸಿದರು. 1958ರಲ್ಲಿ ರಾಜಕುಮಾರ ಫಿಲಿಪ್ ಬಂದರೆ, 1961ರಲ್ಲಿ
ರಾಣಿ ಎರಡನೇ ಎಲಿಜಬೆತ್ ಆಗಮಿಸಿದರು. 1958ರಲ್ಲಿ ಆಗಮಿಸಿದ ಯೆ ಜಿಯಾನ್ಯಿಂಗ್,
ಚೀನಾದ ಪ್ರಥಮ ಹಾಗೂ ಕೊನೆಯ ಅತಿಥಿ.
1950ರ ಜನವರಿ 26ರಂದು, ದೇಶದ ಎಲ್ಲ ಕಡೆಗಳಲ್ಲಿ ಮುಂಜಾನೆ 'ಪ್ರಭಾತ್ ಫೇರಿ'ಗಳು ನಡೆದವು. ದಿಲ್ಲಿಯಲ್ಲಿ ಪ್ರಥಮ ನಿಯೋಜಿತ ರಾಷ್ಟ್ರಪತಿ ಡಾ.ರಾಜೇಂದ್ರಪ್ರಸಾದ್ ಅವರು ರಾಜಘಾಟ್ಗೆ ತೆರಳಿ ರಾಷ್ಟ್ರಪಿತನಿಗೆ ನಮನ ಸಲ್ಲಿಸಿದರು. ನಂತರ 'ಗವರ್ನ್ಮೆಂಟ್ ಹೌಸ್'ಗೆ (ಈಗಿನ ರಾಷ್ಟ್ರತಿ ಭವನ) ತೆರಳಿ ದೇಶದ ಮೊದಲ ಗವರ್ನರ್ ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ ಅವರನ್ನು ಭೇಟಿಯಾದರು. ನಂತರ ಇಬ್ಬರೂ ದರ್ಬಾರ್ ಹಾಲ್ಗೆ ಆಗಮಿಸಿದರು.
ಈ ಧ್ವಜ ಈಗಿನ ಧ್ವಜದಂತಿರಲಿಲ್ಲ. ಅದರಲ್ಲಿ ನಾಲ್ಕು ವಿಭಾಗಗಳಿದ್ದವು. ಮೊದಲ ಭಾಗದಲ್ಲಿ ಅಶೋಕನ ಸಿಂಹಗಳು, ಎರಡನೇ ಭಾಗದಲ್ಲಿ ಅಜಂತಾ ಗುಹೆಯ 5ನೇ ಶತಮಾನದ ಚಿತ್ರ, ಮೂರನೇ ಭಾಗದಲ್ಲಿ ದಿಲ್ಲಿಯ ಕೆಂಪು ಕೊಟೆಯ ತೂಕಯಂತ್ರ, ನಾಲ್ಕನೇ ಭಾಗದಲ್ಲಿ ಸಾರಾನಾಥ ಸ್ತೂಪದ ಪದ್ಮದಳ ಇದ್ದವು. 1971ರಲ್ಲಿ ಈ ಧ್ವಜದ ಬದಲು ತಿರಂಗಾ ಬಂತು.
ನಂತರ ರಾಷ್ಟ್ರಗೀತೆ ಮೊಳಗಿ. 31 ಗನ್ ಸೆಲ್ಯೂಟ್ ನಡೆಯಿತು. ನಂತರ ರಾಷ್ಟ್ರಪತಿಗಳು ಹಿಂದಿಯಲ್ಲಿ ತಮ್ಮ ಭಾಷಣ ಮಾಡಿದರು. ''ನಮ್ಮ ಪ್ರಜೆಗಳು ನ್ಯಾಯ, ಸಮಾನತೆ ಹಾಗೂ ಸ್ವಾತಂತ್ರ್ಯ ಖಚಿತಪಡಿಸುವುದು, ಈ ವೈವಿಧ್ಯಮಯ ದೇಶದ ವಿಭಿನ್ನ ಸಂಸ್ಕೃತಿಗಳನ್ನು ಹಂಚಿಕೊಂಡ ಜನತೆಗೆ ತಮ್ಮ ನಂಬಿಕೆ ಭಾಷೆ ಆಚರಣೆಗಳಿಗೆ ಸುಗಮವಾದ ಅವಕಾಶ ಕಲ್ಪಿಸಿಕೊಡುವುದು ನಮ್ಮ ಗಣತಂತ್ರದ ಉದ್ದೇಶವಾಗಿದೆ,'' ಎಂದರು. ಅದೇ ಅದಿನ ಅವರು ಪ್ರಧಾನಿ ಸೇರಿದಂತೆ ಸಚಿವಸಂಪುಟದ ಪ್ರಮಾಣವಚನ ನೆರವೇರಿಸಿದರು.
ಸಂಜೆ ಗಣತಂತ್ರ ಸಾರ್ವಜನಿಕ ಕಾರ್ಯಕ್ರಮ ನಡೆಯಿತು. ರಾಷ್ಟ್ರಪತಿಗಳು ಹಾಗೂ ವಿಶೇಷ ಅತಿಥಿ ಸುಕರ್ನೊ, ಆರು ಕುದುರೆಗಳನ್ನು ಹೂಡಿದ ರಥದಲ್ಲಿ ರಾಷ್ಟ್ರಪತಿ ಭವನದಿಂದ ಹೊಸದಿಲ್ಲಿಯ ಇರ್ವಿನ್ ಸ್ಟೇಡಿಯಂಗೆ (ಈಗ ಧ್ಯಾನ್ಚಂದ್ ಸ್ಟೇಡಿಯಂ) ಆಗಮಿಸಿದರು. 5 ಮೈಲು ಉದ್ದದ ರಸ್ತೆಯ ಇಕ್ಕೆಲಗಳಲ್ಲೂ ಜನಸಾಗರ ನೆರೆದಿತ್ತು. 15 ವಿಶಿಷ್ಟ ಹೆಬ್ಬಾಗಿಲುಗಳ ಮೂಲಕ ಮೆರವಣಿಗೆ ಹಾದುಬಂತು.
ಈ ಹೆಬ್ಬಾಗಿಲುಗಳನ್ನು ದೇಶದ ಸಂಸ್ಕೃತಿ ಹಾಗೂ ಪುರಾಣಗಳನ್ನು ಚಿತ್ರಿಸುವಂತೆ ರೂಪಿಸಲಾಗಿತ್ತು. ಸ್ಟೇಡಿಯಂನಲ್ಲಿ ಸಾವಿರಾರು ಪ್ರೇಕ್ಷಕರು, ಗಣ್ಯರು, ವಿದೇಶಿ ಅತಿಥಿಗಳ ಮುಂದೆ ಧ್ವಜಾರೋಹಣ, ರಾಷ್ಟ್ರಗೀತೆ ನಡೆದವು. ಭಾರತೀಯ ಸೈನ್ಯದ ಮೂರು ದಳಗಳು ಪಥಸಂಚಲನ ನಡೆಸಿದವು. ಕೊನೆಯಾದಾಗಿ ನಿರ್ಗಮಿತ ಗವರ್ನರ್ ಜನರಲ್ ಅವರು ಗಣ್ಯರಿಗೆ ಭೋಜನ ಏರ್ಪಡಿಸಿದರು.
ಅತಿ ದೊಡ್ಡ ಲಿಖಿತ ಸಂವಿಧಾನ
ಭಾರತದ ಸಂವಿಧಾನ, ಜಗತ್ತಿನಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನ. ಇದರಲ್ಲಿ ಒಂದು ಮುನ್ನುಡಿ, 22 ಭಾಗಗಳು, 12 ಪರಿಚ್ಛೇದಗಳು, 448 ವಿಧಿಗಳು, 5 ಅನುಬಂಧಗಳು ಹಾಗೂ 113 ತಿದ್ದುಪಡಿಗಳು ಇವೆ. ಇಂಗ್ಲಿಷ್ನ ಸಂವಿಧಾನ ಪ್ರತಿಯಲ್ಲಿ 1,17,369 ಪದಗಳಿವೆ. ಸಂವಿಧಾನ ರಚನೆಯಾಗುವ ಮುನ್ನ ಅದರ ಕರಡು ಸುಮಾರು 2000 ಬಾರಿ ತಿದ್ದುಪಡಿಗೆ ಒಳಗಾಗಿದೆ. ಇದು ಕೈಬರಹದಲ್ಲಿರುವ ಅತಿ ದೊಡ್ಡ ಸಂವಿಧಾನವೂ ಹೌದು.
ಮೂಲದಲ್ಲಿ ಇದನ್ನು ಟೈಪ್ ಮಾಡಿರಲಿಲ್ಲಅಥವಾ ಪ್ರಿಂಟ್ ಕೂಡ ಮಾಡಿರಲಿಲ್ಲ. ಇದನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸಂಪೂರ್ಣ ಕೈಬರಹದಲ್ಲಿ ಬರೆದು, ಕ್ಯಾಲಿಗ್ರಾಫ್ ಮಾಡಲಾಗಿದೆ. ಇದನ್ನು ಕೈಬರಹದಲ್ಲಿ ಪೂರ್ತಿಯಾಗಿ ಬರೆದವರು ಪ್ರೇಮ್ ಬಿಹಾರಿ ನಾರಾಯಣ್ ರೈಜದಾ. ನಂತರ ಇದನ್ನು ಡೆಹ್ರಾಡೂನ್ನಲ್ಲಿ ಮುದ್ರಿಸಿ ಫೋಟೋಲಿಥೋಗ್ರಾಫ್ ಮಾಡಲಾಯಿತು. ಮೂಲ ಸಂವಿಧಾನದ ಪ್ರತಿ ಪುಟವನ್ನೂ ಕಲಾತ್ಮಕವಾಗಿ ಸಿಂಗರಿಸಲಾಗಿದೆ. ಪ್ರತಿ ಪುಟದಲ್ಲೂ ಕೋಲ್ಕೊತ್ತಾದ ಶಾಂತಿನಿಕೇತನದ ಕಲಾವಿದರು ಭಾರತೀಯ ಪುರಾಣ ಹಾಗೂ ಇತಿಹಾಸದ ಚಿತ್ರಗಳನ್ನು ಬರೆದು ಕಳೆಗಟ್ಟಿಸಿದ್ದಾರೆ. ಬೇವಹರ್ ರಾಮಮನೋಹರ ಸಿನ್ಹಾ ಹಾಗೂ ನಂದಲಾಲ್ ಬೋಸ್ ಅವರಲ್ಲಿ ಪ್ರಮುಖರು.
ಒಂದೇ ಒಂದು ಬುಲೆಟ್ಟೂ ಇಲ್ಲ!
ಭವ್ಯ ಗಣರಾಜ್ಯೋತ್ಸವ ಪರೇಡ್ನಲ್ಲಿ ಹೆಜ್ಜೆಹಾಕುವ ನೂರಾರು ಯೋಧರ ಕೈಗಳಲ್ಲಿರುವ ಅತ್ಯಾಧುನಿಕ ರೈಫಲ್ ಹಾಗೂ ಬಂದೂಕುಗಳಲ್ಲಿ ಯಾವುದರಲ್ಲೂಒಂದೇ ಒಂದು ಗುಂಡು ಇಲ್ಲದಂತೆ (ಗನ್ ಸೆಲ್ಯೂಟ್ ನೀಡುವ ದಳ ಹೊರತುಪಡಿಸಿ) ನೋಡಿಕೊಳ್ಳಲಾಗುತ್ತದೆ. ಪಥಸಂಚಲನದಲ್ಲಿ ಭಾಗವಹಿಸುವ ಪ್ರತಿಯೊಬ್ಬನನ್ನೂ ನಾಲ್ಕು ಬಾರಿ ಭದ್ರತಾ ಪರಿಶೀಲನೆಯ ಬಳಿಕವೇ ಒಳಬಿಡಲಾಗುತ್ತದೆ. ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಅತಿ ಗಣ್ಯರು ಇದರಲ್ಲಿ ಭಾಗವಹಿಸುವುದರಿಂದಾಗಿ ಈ ಎಚ್ಚರಿಕೆ. ಭೂಸೈನ್ಯ ತುಕಡಿ ಯೋಧರು ದೇಶೀ ತಯಾರಿಯ 'ಇನ್ಸಾಸ್' ರೈಫಲ್ಲನ್ನು ಹೊಂದಿರುತ್ತಾರೆ.
ರಾಜಪಥ ಪ್ರವೇಶ
ರಾಜಪಥದಲ್ಲಿ ಗಣತಂತ್ರ ಪರೇಡ್ ನಡೆಯುವ ಪದ್ಧತಿ ರೂಢಿಗೆ ಬಂದುದು 1955ರಿಂದ. ಅಲ್ಲಿಯವರೆಗೆ, ಅಂದರೆ 1950ರಿಂದ 1955ರವರೆಗೆ ಇದನ್ನು ದಿಲ್ಲಿಯ ಕೆಂಪು ಕೋಟೆ, ನ್ಯಾಷನಲ್ ಸ್ಟೇಡಿಯಂ, ಕಿಂಗ್ಸ್ವೇ ಕ್ಯಾಂಪ್ ಹಾಗೂ ರಾಮಲೀಲಾ ಮೈದಾನದಲ್ಲಿ ನಡೆಸಲಾಗುತ್ತಿತ್ತು. ರಾಜಪಥವನ್ನು ಮೊದಲು ಕಿಂಗ್ಸ್ವೇ ಎಂದು ಕರೆಯಲಾಗುತ್ತಿತ್ತು.
ಗನ್ ಸೆಲ್ಯೂಟ್!
ರಾಷ್ಟ್ರಪತಿಗಳು ರಾಷ್ಟ್ರಧ್ವಜ ಆರೋಹಣ ಮಾಡುವ ಸಂದರ್ಭದಲ್ಲಿ ನಡೆಸುವ 21 ಗನ್ ಸೆಲ್ಯೂಟ್ಗಳನ್ನು 7 ಫಿರಂಗಿಗಳ ಮೂಲಕ 3 ಸುತ್ತುಗಳಲ್ಲಿಮಾಡಲಾಗುತ್ತದೆ. ಬ್ಯಾಂಡ್ನಲ್ಲಿ ರಾಷ್ಟ್ರಗೀತೆ ಮೊಳಗುವ ಮುನ್ನ ಒಮ್ಮೆ, ರಾಷ್ಟ್ರಗೀತೆಯ ಬಳಿಕ ಎರಡು ಬಾರಿ ವಂದನೆ ನಡೆಯುತ್ತದೆ.
2015ರಲ್ಲಿ ನಡೆದ ಗಣತಂತ್ರ ಪರೇಡ್ನ ಒಟ್ಟು ವೆಚ್ಚ 320 ಕೋಟಿ ರೂ. ಎಂಬುದು ಆರ್ಟಿಐ ಮಾಹಿತಿ. ಅದರ ಬಳಿಕ ವೆಚ್ಚ ಹೆಚ್ಚಿರಬಹುದು. ನಿಖರ ಮೊತ್ತ ತಿಳಿಯದು. ಆದರೆ ಪ್ರವೇಶಿಗರಿಗೆ ಟಿಕೆಟ್ ಕೂಡ ನೀಡಿ ಹಣ ಸಂಗ್ರಹಿಸಲಾಗುತ್ತದೆ. ಆದರೆ ದೇಶದ ಸರ್ವಭೌಮತೆ, ಘನತೆ, ಗಣತಂತ್ರ, ಸೇನಾಶಕ್ತಿಯ ಈ ಪ್ರದರ್ಶನವನ್ನು ಹಣಕಾಸಿನಿಂದ ಅಳೆಯಲಾಗದು.