ಬದಿಯಡ್ಕ: ಜನಸೇವಾ ಚಾರಿಟೇಬಲ್ ಅಸೋಸಿಯೇಶನ್ ಬೆಂಗಳೂರು ಇದರ ಆಶ್ರಯದಲ್ಲಿ ಅಗಲ್ಪಾಡಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ವೇದಮಾತಾ ಟ್ರಸ್ಟ್ ಅಗಲ್ಪಾಡಿ, ಕರ್ಹಾಡ ವೈದಿಕ ಸಭಾ ಅಗಲ್ಪಾಡಿ ಮತ್ತು ಕರ್ಹಾಡ ಸಮಾಜದ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಜ.8 ರಂದು ಭಾನುವಾರ ಅಗಲ್ಪಾಡಿ ಶ್ರೀದುರ್ಗಾಪರಮೇಶ್ವರಿ ದೇವಾಲಯದಲ್ಲಿ ಅಶ್ವಲಾಯನ ಸೂತ್ರಾನುಸಾರಿ ‘ಅಂತ್ಯೇಷ್ಠಿ’ ವಿಷಯದ ಬಗ್ಗೆ ಧಾರ್ಮಿಕ ಚಿಂತನಾ ಸತ್ರ ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ ವಿದ್ವಜ್ಜನರ ಸಮಕ್ಷಮ ಆಯೋಜಿಸಲಾಗಿದೆ.
ಬೆಳಿಗ್ಗೆ 9ಕ್ಕೆ ಶ್ರೀಅಗಲ್ಪಾಡಿ ಕ್ಷೇತ್ರದ ಆನುವಂಶಿಕ ಮೊಕ್ತೇಸರ ವಾಸುದೇವ ಭಟ್ ಉಪ್ಪಂಗಳ ದೀಪ ಬೆಳಗಿಸಿ ಉದ್ಘಾಟಿಸುವರು. ಈ ಸಂದರ್ಭ ಬಾಲಸುಬ್ರಹ್ಮಣ್ಯ ಭಟ್ ಕೆ ಸಂಪಾದಿಸಿರುವ ‘ಶ್ರಾದ್ದ ಪ್ರಯೋಗ’ ಪುಸ್ತಕವನ್ನು ಜಯಪ್ರಕಾಶ ನಾರಾಯಣ ಶರ್ಮಾ ಪೆರಿಂಜೆ ಬಿಡುಗಡೆಗೊಳಿಸುವರು. ಬಳಿಕ ನಡೆಯುವ ಗೋಷ್ಠಿಗಳಲ್ಲಿ ಔಧ್ರ್ವದೇಹಿಕ ಕ್ರಿಯಾಭಾಗಗಳ ಪ್ರಸ್ತುತತೆ, ಮರಣ ಕಾಲದ ಕರ್ತವ್ಯಗಳು, ಅಗ್ನಿ ಸಂಸ್ಕಾರ, ದಶಾಹಕೃತ್ಯಗಳು, ಧರ್ಮೋದಕ, ಏಕೋದ್ದಿಷ್ಟಾದಿ ವೈಕುಂಠ ಸಮಾರಾಧನಾ ಪರ್ಯಂತ ಕಾರ್ಯಕ್ರಮಗಳು ಮತ್ತು ಆಚರಣೆ, ಮಾಸಿಕ-ಸಾಂವತ್ಸರಿಕ ಶ್ರಾದ್ದ ಚಿಂತನೆ, ದೇಶಾಚಾರ-ಕಾಲಾಚಾರಗಳ ವಿಮರ್ಶೆಗಳ ಬಗ್ಗೆ ಚಿಂತನ ಮಂಥನಗಳು ನಡೆಯಲಿದೆ. ವಿದ್ವಾನ್.ಹಿರಣ್ಯ ವೆಂಕಟೇಶ್ವರ ಭಟ್, ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿಗಳು, ಡಾ.ಸತ್ಯನಾರಾಯಣ ಆಚಾರ್ಯ ಬೆಂಗಳೂರು, ಬೇಂಗ್ರೋಡಿ ಮಾಧವ ಭಟ್, ವೇದಮೂರ್ತಿ ಬೆಳ್ಳೆಚ್ಚಾಲು ಸುಬ್ರಹ್ಮಣ್ಯ ಭಟ್, ಬೋಳೂರು ವಿದ್ಯಾಶಂಕರ ಭಟ್ ಮೊದಲಾದ ವೇದ ವಿದ್ವಾಂಸರು ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜ.8 ರಂದು ಅಗಲ್ಪಾಡಿಯಲ್ಲಿ ಧಾರ್ಮಿಕ ಚಿಂತನಾ ಸತ್ರ
0
ಜನವರಿ 02, 2023