ನವದೆಹಲಿ: ಕೆಲ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ, ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾವು (ಸಿಐಐ) ಕೇಂದ್ರ ಸರ್ಕಾರಕ್ಕೆ ಉಚಿತವಾಗಿ ಕೋವಿಶೀಲ್ಡ್ ಲಸಿಕೆಗಳನ್ನು ಪೂರೈಸಲು ಪ್ರಾರಂಭಿಸಿದ್ದು, ಮೊದಲ ಹಂತದಲ್ಲಿ 80 ಲಕ್ಷ ಡೋಸ್‌ಗಳನ್ನು ಶನಿವಾರ ಪೂರೈಸಿದೆ.
ಸಿಐಐನ ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರಕ್ಕೆ ₹ 410 ಕೋಟಿ ಮೌಲ್ಯದ ಎರಡು ಕೋಟಿ ಡೋಸ್‌ಗಳ ಕೋವಿಶೀಲ್ಡ್ ಲಸಿಕೆಯನ್ನು ಉಚಿತವಾಗಿ ಪೂರೈಸಲಾಗುವುದು, ಈ ಪೈಕಿ 80 ಲಕ್ಷ ಡೋಸ್‌ಗಳ ಕೋವಿಶೀಲ್ಡ್‌ನ ಮೊದಲ ಹಂತದ ಪೂರೈಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕೋವಿಡ್ ನಿರೋಧಕ ಲಸಿಕೆ ನೀಡಿಕೆ ಅಭಿಯಾನ ಪ್ರಾರಂಭವಾದ ಬಳಿಕ ಸಿಐಐ ಇದುವರೆಗೆ ಕೇಂದ್ರ ಸರ್ಕಾರಕ್ಕೆ 170 ಕೋಟಿ ಡೋಸ್‌ಗಳಷ್ಟು ಕೋವಿಶೀಲ್ಡ್ ಲಸಿಕೆ ಪೂರೈಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.