ನವದೆಹಲಿ: ನೋಟು ರದ್ದತಿ ಅಥವಾ ಡಿಮಾನೆಟೈಸೇಷನ್ ಬಳಿಕ ಸಾರ್ವಜನಿಕರಲ್ಲಿರುವ ನಗದು ಮೌಲ್ಯ ದುಪ್ಪಟ್ಟಾಗಿದ್ದು, ನಗದು ಚಲಾವಣೆ ಶೇ.83ರಷ್ಟು ಏರಿಕೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಅಂಕಿ ಅಂಶಗಳು ಮಾಹಿತಿ ನೀಡಿವೆ.
ಚಲಾವಣೆಯಲ್ಲಿದ್ದ ಶೇ.86 ರಷ್ಟು ಕರೆನ್ಸಿಯನ್ನು ರದ್ದುಗೊಳಿಸಿದ ಆರು ವರ್ಷಗಳ ಬಳಿಕ ಸಾರ್ವಜನಿಕರಲ್ಲಿರುವ ನಗದು ಮೌಲ್ಯ ದುಪ್ಪಟ್ಟಾಗಿದೆ. ಮಾಧ್ಯಮಗಳಿಗೆ ದೊರೆತ ರಿಸರ್ವ್ ಬ್ಯಾಂಕ್ ಅಂಕಿ ಅಂಶಗಳ ಪ್ರಕಾರ, 2022ರ ಡಿಸೆಂಬರ್ 23ರಂದು ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿಯ ಮೌಲ್ಯ (ಅಥವಾ ಸಾರ್ವಜನಿಕರ ಬಳಿಯಿರುವ ನಗದು) 32.42 ಲಕ್ಷ ಕೋಟಿ ರೂ ಎಂದು ತಿಳಿದುಬಂದಿದೆ.
ಕಪ್ಪುಹಣ ತಡೆ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಹಳೆಯ 1,000 ಮತ್ತು 500 ರೂ ನೋಟುಗಳನ್ನು ನ.4, 2016 ರಂದು ನಿಷೇಧಿಸಲಾಗಿತ್ತು. ಅಂದು 17.74 ಲಕ್ಷ ಕೋಟಿ ರೂ ಮೌಲ್ಯದ ನೋಟುಗಳು ಚಲಾವಣೆಯಲ್ಲಿದ್ದವು. ನೋಟು ನಿಷೇಧದ ಬಳಿಕ ಚಲಾವಣೆಯಲ್ಲಿರುವ ನಗದು ಮೌಲ್ಯ 9 ಲಕ್ಷ ಕೋಟಿಯಷ್ಟು ಕುಸಿದಿತ್ತು. 2017 ರ ಜನವರಿಗೆ ಹೋಲಿಸಿದರೆ, ಚಲಾವಣೆಯಲ್ಲಿರುವ ನಗದು 3 ಪಟ್ಟು ಏರಿಕೆ ಅಥವಾ ಶೇ 260ರಷ್ಟು ಜಿಗಿತ ಕಂಡಿದೆ. ನ.4, 2016 ರಿಂದ ಪರಿಗಣಿಸಿದರೆ ಸುಮಾರು 83 ಪ್ರತಿಶತ ಏರಿಕೆಯಾಗಿದೆ ಎಂದು ಹೇಳಲಾಗಿದೆ
ನ.8, 2016 ರಂದು ಚಲಾವಣೆಯಲ್ಲಿದ್ದ ಒಟ್ಟು 15.4 ಲಕ್ಷ ಕೋಟಿ ರೂ ಮೌಲ್ಯದ ನೋಟುಗಳಲ್ಲಿ 15.3 ಲಕ್ಷ ಕೋಟಿ ರೂ ಮೌಲ್ಯದ ಅಥವಾ ಶೇ 99.3 ರಷ್ಟು ನೋಟುಗಳನ್ನು ಸಾರ್ವಜನಿಕರು ಹಿಂದಿರುಗಿಸಿದ್ದರು. ನಿಷೇಧಿತ ಕರೆನ್ಸಿ ನೋಟುಗಳ ಬದಲಿಗೆ ಹೊಸ 500 ಮತ್ತು 2,000 ರೂ ನೋಟುಗಳು ಚಲಾವಣೆಗೆ ಬಂದಿವೆ. ಆದರೆ, 1,000 ರೂ ನೋಟು ಮರು ಚಲಾವಣೆಗೆ ಬಂದಿಲ್ಲ.
ರಿಮೊನೆಟೈಸೇಶನ್ ವೇಗವನ್ನು ಹೆಚ್ಚಿಸಿದಂತೆ, CIC ವಾರದಿಂದ ವಾರಕ್ಕೆ ಏರಿತು ಮತ್ತು ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಗರಿಷ್ಠ ಶೇಕಡಾ 74.3 ತಲುಪಿತು. ನಂತರ ಜೂನ್ 2017 ರ ಅಂತ್ಯದ ವೇಳೆಗೆ ಅದರ ಪೂರ್ವ ನೋಟು ಅಮಾನ್ಯೀಕರಣದ ಗರಿಷ್ಠ 85 ಪ್ರತಿಶತದಷ್ಟಿತ್ತು ಎಂದು ಹೇಳಲಾಗಿದೆ. ನೋಟುಗಳನ್ನು ಅಮಾನ್ಯ ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ಪ್ರಕಟಿಸಿದ್ದು, ನೋಟು ಅಮಾನ್ಯಗೊಳಿಸಿದ ಸರ್ಕಾರದ ನಿರ್ಧಾರವನ್ನು 4:1ರ ಬಹುಮತದ ತೀರ್ಪಿನೊಂದಿಗೆ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.