ನವದೆಹಲಿ: ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ಒಂಬತ್ತು ದಿನಗಳ ವಿರಾಮ ಪಡೆದಿದ್ದ ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆ ಇಂದು ದೆಹಲಿಯಿಂದ ಪುನರಾರಂಭಗೊಂಡಿದೆ.
ರಾಹುಲ್ ಗಾಂಧಿ ಅವರ ನೇತೃತ್ವದ ಯಾತ್ರೆಯು ದೆಹಲಿಯ ಯಮುನಾ ಬಜಾರ್‌ನಿಂದ ಆರಂಭಗೊಂಡಿತು.ಇಂದು ಮಧ್ಯಾಹ್ನದ ಹೊತ್ತಿಗೆ ಯಾತ್ರೆ ಲೋನಿ ಮೂಲಕ ಉತ್ತರ ಪ್ರದೇಶಕ್ಕೆ ತಲಪಿದೆ.
ರಾಹುಲ್ ಗಾಂಧಿ ಅವರು ಹಿರಿಯ ನಾಯಕಿ ಅಂಬಿಕಾ ಸೋನಿ ಅವರೊಂದಿಗೆ ಮೆರವಣಿಗೆಯ ಸ್ಥಳಕ್ಕೆ ಆಗಮಿಸಿದರು, ಅಲ್ಲಿ ಸಾವಿರಾರು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಜಮಾಯಿಸಿದ್ದರು.
ಉತ್ತರ ಪ್ರದೇಶದಲ್ಲಿ ಮೂರು ದಿನ ಸಾಗಲಿರುವ ಯಾತ್ರೆಯು ಜನವರಿ 6 ರಂದು ಮರಳಿ ಹರಿಯಾಣ ಪ್ರವೇಶಿಸಲಿದೆ.
ಯಾತ್ರೆಯು ಪಂಜಾಬ್‌ನಲ್ಲಿ ಜನವರಿ 11 ರಿಂದ 20 ರವರೆಗೆ ಸಾಗಲಿದೆ. ಹಿಮಾಚಲ ಪ್ರದೇಶದಲ್ಲಿ ಒಂದು ದಿನ ನಡೆಯಲಿದೆ.
ನಂತರ ಜನವರಿ 20ರ ಸಂಜೆ ಯಾತ್ರೆ ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಲಿದೆ.
'ಭಾರತ್ ಜೋಡೊದ ಸಂದೇಶವು ಯಾತ್ರೆ ಹಾದುಹೋಗುವ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಈಗಾಗಲೇ ಹಲವಾರು ರಾಜ್ಯ ಮಟ್ಟದ ಯಾತ್ರೆಗಳನ್ನು ಘೋಷಿಸಲಾಗಿದೆ. ಮುಂಬರುವ 'ಹಾಥ್ ಸೆ ಹಾಥ್ ಜೋಡೊ ಅಭಿಯಾನ' ಯಾತ್ರೆಯ ಸಂದೇಶವನ್ನು ಮತ್ತಷ್ಟು ಪಸರಿಸಲಿದೆ. ಪ್ರತಿಯೊಬ್ಬ ಭಾರತೀಯನ ಮನೆ ಬಾಗಿಲಿಗೆ ಯಾತ್ರೆ ತಲುಪಲಿದೆ'' ಎಂದು ಪಕ್ಷದ ವಕ್ತಾರ ಜೈರಾಮ್ ರಮೇಶ್ ಹೇಳಿದ್ದಾರೆ.