ನವದೆಹಲಿ : ಟಿಟನೊಸಾರಸ್‌ಗಳಿಗೆ (ಅತ್ಯಂತ ದೊಡ್ಡ ಡೈನೋಸಾರ್ ಸಂತತಿ) ಸಂಬಂಧಿಸಿದ 92 ಗೂಡುಕಟ್ಟುವ ತಾಣಗಳು ಹಾಗೂ ಆ ಸ್ಥಳಗಳಲ್ಲಿದ್ದ ಅವುಗಳ 256 ಮೊಟ್ಟೆಯ ಪಳೆಯುಳಿಕೆಗಳನ್ನು ಮಧ್ಯಪ್ರದೇಶದ ಧಾರ್ ಜಿಲ್ಲೆಯ ನರ್ಮದಾ ಕಣಿವೆಯಲ್ಲಿ ಸಂಶೋಧಕರು ಕೆಲದಿನಗಳ ಹಿಂದೆ ಪತ್ತೆ ಹಚ್ಚಿದ್ದಾರೆ.
'ಪ್ಲಸ್ ಒನ್' ನಿಯತಕಾಲಿಕೆಯಲ್ಲಿ ಈ ಕುರಿತ ಮಾಹಿತಿ ಪ್ರಕಟಿಸಲಾಗಿದೆ. ಭಾರತದ ಉಪಖಂಡದಲ್ಲಿ ಟಿಟನೊಸಾರಸ್‌ಗಳು ದೊಡ್ಡ ಸಂಖ್ಯೆಯಲ್ಲಿ ನೆಲೆಸಿದ್ದವು ಎಂಬುದು ಇದರಿಂದ ಬಹಿರಂಗವಾಗಿದೆ.
'ಈ ಪ್ರದೇಶದಲ್ಲಿ ಒಟ್ಟು ಆರು ಬಗೆಯ ಮೊಟ್ಟೆಯ ಪಳೆಯುಳಿಕೆಗಳು ಪತ್ತೆಯಾಗಿವೆ. ಟಿಟನೊಸಾರಸ್‌ಗಳು ಮೊಸಳೆಗಳ ಹಾಗೆ ಆಳವಿಲ್ಲದ ಹೊಂಡಗಳಲ್ಲಿ ತಮ್ಮ ಮೊಟ್ಟೆಗಳನ್ನು ಅಡಗಿಸಿಡುತ್ತಿದ್ದವು ಎಂಬುದು ಗೂಡುಗಳ ವಿನ್ಯಾಸದ ಅಧ್ಯಯನದಿಂದ ತಿಳಿದು ಬಂದಿದೆ' ಎಂದು ಸಂಶೋಧಕರು ಹೇಳಿದ್ದಾರೆ.