ಠಾಣೆ: ಬಲಪಂಥೀಯ ಸಂಘಟನೆಗೆ ಸೇರಿದ್ದ ಗುಂಪೊಂದು ಶಾರುಖ್ ಖಾನ್, ದೀಪಿಕಾ ಪಡುಕೋಣೆ ನಟಿಸಿರುವ 'ಪಠಾಣ್'ಚಿತ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಭಾನುವಾರ ಸಂಜೆ ಚಿತ್ರಮಂದಿರದ ಪ್ರದರ್ಶನ ಬೋರ್ಡ್ ಹಾನಿಗೊಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾರುಖ್ ಖಾನ್ ವಿರುದ್ಧ ಘೋಷಣೆ ಕೂಗುತ್ತ ಚಿತ್ರಮಂದಿರ ಹಾನಿಗೊಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಘಟನೆಗೆ ಸಂಬಂಧಿಸಿದಂತೆ 9 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಪ್ರಕರಣ ದಾಖಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಚಿತ್ರದ 'ಬೇಷರಮ್ ರಂಗ್'ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಬಟ್ಟೆ ಧರಿಸಿ ನರ್ತಿಸಿದ್ದರು. ಕೇಸರಿ ಬಣ್ಣವನ್ನು ಅವಮಾನಿಸುವ ಸಾಲುಗಳು ಗೀತೆಯಲ್ಲಿದೆ ಎಂಬ ಆಕ್ರೋಶವೂ ವ್ಯಕ್ತವಾಗಿತ್ತು. ಈ ಮೂಲಕ ಚಿತ್ರತಂಡ ಕೆಲವರ ಭಾವನೆ ಘಾಸಿಗೊಳಿಸಿದೆ ಎಂದು ಕೆಲ ಬಲಪಂಥೀಯ ಸಂಘಟನೆಗಳು ಚಿತ್ರ ಬಾಯ್ಕಾಟ್ ಕರೆ ನೀಡಿದ್ದವು. ದೇಶದ ಕೆಲವೆಡೆ ಪ್ರತಿಭಟನೆ, ಚಿತ್ರಮಂದಿರಕ್ಕೆ ದಾಳಿಯ ನಡುವೆಯೂ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಪಠಾಣ್ ಯಶಸ್ವಿಯಾಗಿದೆ. 4 ದಿನದಲ್ಲಿ ಚಿತ್ರ ವಿಶ್ವದಾದ್ಯಂತ ₹429 ಕೋಟಿ ಗಳಿಸಿದೆ.