ಕುಂಬಳೆ: ಕೇರಳ ಲೋಕಸೇವಾ ಆಯೋಗವು ಕಾಸರಗೋಡು ಜಿಲ್ಲೆಯಲ್ಲಿ ಕಿರಿಯ ಪ್ರಾಥಮಿಕ ಶಾಲಾ ಕನ್ನಡ ಮಾಧ್ಯಮ ಶಿಕ್ಷಕ ನೇಮಕಾತಿ ಪರೀಕ್ಷೆಗೆ ಡಿ.31 ರಂದು ಅಧಿಸೂಚನೆ ಹೊರಡಿಸಿದ್ದು(ಕೆಟಗರಿ ಸಂಖ್ಯೆ 707/2022) ಅರ್ಜಿಸಲ್ಲಿಸಲು ಫೆ.1 ರವರೆಗೆ ಅವಕಾಶ ನೀಡಲಾಗಿದೆ. ಆದರೆ, ಪ್ರಸ್ತುತ ವರ್ಷ ಶಿಕ್ಷಕ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅಸಾಧ್ಯವಾಗಿ ಅತಂತ್ರತೆ ನಿರ್ಮಾಣವಾಗಿದೆ.
2020-22ನೇ ಶೈಕ್ಷಣಿಕ ವರ್ಷದಲ್ಲಿ ಅಧ್ಯಾಪಕ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಕಳೆದ ನವಂಬರ್ ತಿಂಗಳಲ್ಲಿ ಅಂತಿಮ ಪರೀಕ್ಷೆಗಳು ನಡೆದಿದ್ದು, ಇನ್ನೂ ಫಲಿತಾಂಶ ಪ್ರಕಟಗೊಳ್ಳದ ಹಿನ್ನೆಲೆಯಲ್ಲಿ ಭಾರೀ ಹಿನ್ನಡೆ ಬಂದೊದಗಿದೆ. ಸಾಮಾನ್ಯವಾಗಿ 6 ರಿಂದ 7 ವರ್ಷಗಳ ಅಂತರದಲ್ಲಿ ಕನ್ನಡ ಶಿಕ್ಷಕರ ನೇಮಕಾರಿ ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಈ ವರ್ಷ ಪರೀಕ್ಷೆ ಬರೆದ ಹಲವು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ವಂಚಿತರಾಗಿ ಸಂಕಷ್ಟಕ್ಕೊಳಗಾಗಲಿದ್ದಾರೆ.
ಗಡಿನಾಡು ಕಾಸರಗೋಡಿನಲ್ಲಿ ಪ್ರತಿ ವರ್ಷ 40 ರಷ್ಟು ಮಂದಿ ಶಿಕ್ಷಕ ತರಬೇತಿಪಡೆದು ಹೊರಬರುತ್ತಿದ್ದು, ಅವರಿಗೆಲ್ಲ ಸರ್ಕಾರಿ ಶಿಕ್ಷಕ ವೃತ್ತಿಗೆ ಸೇರ್ಪಡೆಗೊಳ್ಳಬೇಕಾದರೆ ಕಾಸರಗೋಡು ಜಿಲ್ಲೆಯ ಶಾಲೆಗಳಲ್ಲೇ ಅವಕಾಶ ಬೇಕಾಗಿದ್ದು, ಸುಧೀರ್ಘ ಅವಧಿಯಲ್ಲಿ ನೇಮಕಾತಿ ನಡೆಯುವ ಕಾರಣ ಇರುವ ಅವಕಾಶಗಳನ್ನು ಬಳಸುವ ತುರ್ತು ಯುವ ಉದ್ಯೋಗಾರ್ಥಿಗಳದ್ದು. ಈ ಮಧ್ಯೆ ಈ ಬಾರಿ ಟಿಟಿಸಿ(ಶಿಕ್ಷಕ ತರಬೇತಿ) ಪರೀಕ್ಷೆಗಳು ನಡೆದಿದ್ದರೂ ಇನ್ನೂ ಫಲಿತಾಂಶ ವಿಳಂಬವಾಗಿರುವುದರಿಂದ ಈ ವರ್ಷದ ತರಬೇತಿ ಮುಗಿಸಿದ ತಂಡ ಸಂಕಷ್ಟಕ್ಕೆ ಸಿಲುಕಿದೆ. ಇದು ಭವಿಷ್ಯದಲ್ಲಿ ಸಮಸ್ಯಾತ್ಮಕವಾಗಿ ಸವಾಲುಗಳಿಗೆ ಎಡೆಮಾಡುವ ಕಾರಣ ಸಂಬಂಧಪಟ್ಟವರು ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ.
ಅಭಿಮತ:
ಈ ವರ್ಷ ಪರೀಕ್ಷೆ ಬರೆದ ಶಿಕ್ಷಕ ವೃತ್ತಿ ನಿರೀಕ್ಷಕರಿಗೆ ಫಲಿತಾಂಶ ಬಾರದಿರುವುದು ಅರ್ಜಿಸಲ್ಲಿಸಲು ತೊಡಕಾಗಲಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕ ತರಬೇತಿ ಅಂತಿಮ ಪರೀಕ್ಷೆಯ ಫಲಿತಾಂಶವನ್ನು ಶೀಘ್ರ ಪ್ರಕಟಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಗುವುದು.
-ಶ್ರೀನಿವಾಸ ರಾವ್.
ಅಧ್ಯಕ್ಷರು, ಕನ್ನಡ ಮಾಧ್ಯಮ ಅಧ್ಯಾಪಕ ಸಂಘ ಕಾಸರಗೋಡು ಜಿಲ್ಲೆ.