ಭುವನೇಶ್ವರ: ಶಾಸಕ ಸೇರಿದಂತೆ ರಶ್ಯದ ಇಬ್ಬರು ಪ್ರವಾಸಿಗಳ ಸಾವಿನ ತನಿಖೆ ಕುರಿತಂತೆ ನಾಲ್ಕು ವಾರಗಳ ಒಳಗೆ ಕ್ರಮಾನುಷ್ಠಾನ ವರದಿ ಸಲ್ಲಿಸುವಂತೆ ಸೂಚಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ ) ರಾಯಗಢ ಪೊಲೀಸ್ ಅಧೀಕ್ಷಕರಿಗೆ ನೋಟಿಸು ಜಾರಿ ಮಾಡಿದೆ.
ಬೆಹ್ರಾಮ್‌ಪುರ ಪಟ್ಟಣದ ಮಾನವ ಹಕ್ಕುಗಳ ಹೋರಾಟಗಾರ ರಬೀಂದ್ರ ಕುಮಾರ್ ಮಿಶ್ರಾ ಅವರು ಸಲ್ಲಿಸಿದ ಅರ್ಜಿಯ ಆಧಾರದಲ್ಲಿ ಈ ಆದೇಶ ನೀಡಲಾಗಿದೆ. ಶುಕ್ರವಾರ ನೀಡಿದ ಆದೇಶದಲ್ಲಿ ಮಾನವ ಹಕ್ಕುಗಳ ಆಯೋಗ, ಪತ್ರ ಸ್ವೀಕರಿಸಿದ ದಿನಾಂಕದಿಂದ ನಾಲ್ಕು ವಾರಗಳ ಒಳಗೆ ಕ್ರಮಾನುಷ್ಠಾನ ವರದಿ ಸಲ್ಲಿಸುವಂತೆ ಸೂಚಿಸಿದೆ.
ವಿದೇಶಿ ಪ್ರಜೆಗಳು ಸಾವನ್ನಪ್ಪಿರುವ ಈ ಪ್ರಕರಣ ಅತಿ ಸೂಕ್ಷ ಎಂದು ಪರಿಗಣಿಸಿ ತನಿಖೆ ನಡೆಸಬೇಕು ಎಂದು ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಮಾಡಿದ್ದೆ ಎಂದು ಮಿಶ್ರಾ ಅವರು ಬೆಹ್ರಾಮ್‌ಪುರದಲ್ಲಿ ಪತ್ರಕರ್ತರಿಗೆ ತಿಳಿಸಿದರು.
ರಶ್ಯ ಶಾಸಕ ಪಾವೆಲ್ ಆಯಂಟೋವ್ (65) ಡಿಸೆಂಬರ್ 24ರಂದು ರಾಯಗಢದ ಹೊಟೇಲ್‌ನ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದರು. ಇದಕ್ಕಿಂತ ಮೊದಲು ಅವರ ಗೆಳೆಯ ವ್ಲಾದಿಮಿರ್ ಬಿಡೆನೋವ್ (61) ಅವರ ಮೃತದೇಹ ಅದೇ ಹೊಟೇಲ್‌ನ ಕೊಠಡಿಯಲ್ಲಿ ಪತ್ತೆಯಾಗಿತ್ತು. ಈ ಘಟನೆ ಕುರಿತಂತೆ ರಾಯಗಢದ ಸದಾರ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.