ನವದೆಹಲಿ:ಪತ್ರಕರ್ತ ರೂಪೇಶ್ ಕುಮಾರ್ ಸಿಂಗ್ ಅವರು ಮಾನವ ಹಕ್ಕುಗಳ ಕುರಿತು ಮಾಡಿದ ಕಾರ್ಯಗಳಿಗೆ ಪ್ರತೀಕಾರವಾಗಿ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ ಎಂದು ಮಾನವ ಹಕ್ಕುಗಳ ರಕ್ಷಕರ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಮೇರಿ ಲಾಲರ್ ಅವರು ಹೇಳಿದ್ದಾರೆ.
ಸಿಂಗ್ ಜೈಲಿನಲ್ಲಿಯೇ ಇದ್ದರೆ ಅವರ ಆರೋಗ್ಯಕ್ಕೆ ಅಪಾಯವುಂಟಾಗಬಹುದು ಎಂದೂ ಅವರು ತಿಳಿಸಿದ್ದಾರೆ.
ಮಾವೋವಾದಿಗಳಿಗೆ ಹಣಕಾಸು ವ್ಯವಸ್ಥೆ ಮಾಡಿದ್ದ ಆರೋಪದಲ್ಲಿ ಜಾರ್ಖಂಡ್ ಪೊಲೀಸರು ಕುಮಾರ್ ಅವರನ್ನು ಬಂಧಿಸಿದ್ದಾರೆ. ಜಾರ್ಖಂಡ್ನ ಗ್ರಾಮಗಳ ನಿವಾಸಿಗಳ ಮೇಲೆ ಕೈಗಾರಿಕಾ ಮತ್ತು ವಾಯುಮಾಲಿನ್ಯಗಳ ದುಷ್ಪರಿಣಾಮದ ಕುರಿತು ತನ್ನ ಟ್ವಿಟರ್ ಖಾತೆಯಲ್ಲಿ ಥ್ರೆಡ್ವೊಂದನ್ನು ಪೋಸ್ಟ್ ಮಾಡಿದ ಬಳಿಕ ಕುಮಾರ್ರನ್ನು ಬಂಧಿಸಲಾಗಿತ್ತು.
ಲಾಲರ್ ಅವರು ಅ.26ರಂದು ತಾನು ಭಾರತ ಸರಕಾರಕ್ಕೆ ಬರೆದಿದ್ದ ಪತ್ರವನ್ನು ಗುರುವಾರ ಬಹಿರಂಗಗೊಳಿಸಿದ್ದಾರೆ.
'ಸಿಂಗ್ ಅವರ ಕಾನೂನುಬದ್ಧ ಮಾನವ ಹಕ್ಕು ಕಾರ್ಯಕ್ಕೆ ಪ್ರತೀಕಾರವಾಗಿ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದ್ದು,ಇದು ನಮ್ಮ ಕಳವಳವಾಗಿದೆ. ಸಿಂಗ್ ಅವರ ಆರೋಗ್ಯ ಸ್ಥಿತಿಯೂ ನಮಗೆ ಕಳವಳವನ್ನುಂಟು ಮಾಡಿದೆ. ಅದು ನಿದ್ರಾಹೀನತೆ ಮತ್ತು ಸಾಂಕ್ರಾಮಿಕ ರೋಗಗಳನ್ನು ಹೊಂದಿರುವ ಕೈದಿಗಳ ನಿಕಟ ಸಾಮೀಪ್ಯದಿಂದ ಉಲ್ಬಣಗೊಳ್ಳಬಹುದು. ಸಿಂಗ್ ಅವರು ಕಾಲುಗಳಲ್ಲಿಯ ರಕ್ತನಾಳಗಳ ತೀವ್ರ ನೋವು ಮತ್ತು ಸೆಳೆತದಿಂದ ನರಳುತ್ತಿದ್ದಾರೆ. ಅವರ ಬೆನ್ನಿನಲ್ಲಿಯ ರಕ್ತನಾಳವು ಸಂಕುಚಿತಗೊಂಡಿದೆ ಮತ್ತು ಅವರು ತೆಗೆದುಕೊಳ್ಳುತ್ತಿರುವ ಔಷಧಿಗೆ ಸಾಕಷ್ಟು ನಿದ್ರೆಯ ಅಗತ್ಯವಿದೆ. ಮಾನಸಿಕ ಒತ್ತಡದಿಂದಾಗಿ ಇವೆಲ್ಲ ಉಲ್ಬಣಗೊಳ್ಳಬಲ್ಲದು ' ಎಂದು ಲಾಲರ್ ಪತ್ರದಲ್ಲಿ ಹೇಳಿದ್ದಾರೆ.
ಕಳೆದ ವರ್ಷ ಸಿಂಗ್ ಬಂಧನಕ್ಕೆ ಮುನ್ನ ಪೊಲೀಸರು ಒಂಭತ್ತು ಗಂಟೆಗೂ ಹೆಚ್ಚು ಸಮಯ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಬಂಧನಕ್ಕೆ ಮುನ್ನ ಸಿಂಗ್ಗೆ ಸೇರಿದ ಎರಡು ಲ್ಯಾಪ್ಟಾಪ್ಗಳು, ಒಂದು ಹಾರ್ಡ್ ಡ್ರೈವ್ ಮತ್ತು ಇತರ ಖಾಸಗಿ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಮೆರಿಕದ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ ಹೇಳಿತ್ತು. ಪೆಗಾಸಸ್ ಹ್ಯಾಕಿಂಗ್ ಸಾಫ್ಟ್ವೇರ್ ಮೂಲಕ ಸೈಬರ್ ಕಣ್ಗಾವಲಿಗೆ ಗುರಿಯಾಗಿದ್ದ 40 ಭಾರತೀಯ ಪತ್ರಕರ್ತರ ದೂರವಾಣಿ ಸಂಖ್ಯೆಗಳು ಸೋರಿಕೆಯಾಗಿದ್ದ ಡಾಟಾಬೇಸ್ನಲ್ಲಿ ಕಾಣಿಸಿಕೊಂಡಿದ್ದು,ಇದರಲ್ಲಿ ಸಿಂಗ್ ಅವರೂ ಸೇರಿದ್ದರು.