ನವದೆಹಲಿ : 'ಜನರನ್ನು ಅನಗತ್ಯವಾಗಿ ಜೈಲಿನಲ್ಲಿ ಇಡಬೇಕು ಎಂದು ನಾವು ಬಯಸುವುದಿಲ್ಲ' ಎಂದು ಸುಪ್ರೀಂ ಕೋರ್ಟ್ ಪೀಠ ಮಂಗಳವಾರ ಅಭಿಪ್ರಾಯಪಟ್ಟಿತು.
2020ರ ದೆಹಲಿಯ ಗಲಭೆ ಪ್ರಕರಣ ಸಂಬಂಧ ಮೂವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ದನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಮಾತು ಹೇಳಿತು.
ಹೈಕೋರ್ಟ್ ಜೂನ್ 2021ರಲ್ಲಿ ಜಾಮೀನು ನೀಡಿತ್ತು. ದೆಹಲಿ ಪೊಲೀಸರು ಮೇಲ್ಮನವಿ ಸಲ್ಲಿಸಿದ್ದರು.
'ಇದು, ಜಾಮೀನು ಅರ್ಜಿ ವಿಚಾರಣೆಗೆ ಸಂಬಂಧಿಸಿ ದೆಹಲಿ ಹೈಕೋರ್ಟ್‌ನ ವೇಳೆಯನ್ನು ಸಂಪೂರ್ಣ ವ್ಯರ್ಥ ಮಾಡಿದ ಪ್ರಕರಣ. ಜಾಮೀನು ಅರ್ಜಿ ಬಗ್ಗೆ ಸುದೀರ್ಘ ವಿಚಾರಣೆ ನಡೆಯಬೇಕೇ? ನಮಗೆ ಅರ್ಥವಾಗುತ್ತಿಲ್ಲ' ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿತು.
ನ್ಯಾಯಮೂರ್ತಿ ಎಸ್.ಕೆ.ಕೌಲ್ ಪೀಠದ ನೇತೃತ್ವ ವಹಿಸಿದ್ದು, ನ್ಯಾಯಮೂರ್ತಿಗಳಾದ ಎ.ಎಸ್.ಓಕಾ, ಜೆ.ಬಿ.ಪಾರ್ದಿವಾಲಾ ಅವರೂ ಇದ್ದರು.
ದೆಹಲಿ ಪೊಲೀಸರನ್ನು ಪ್ರತಿನಿಧಿಸಿದ್ದ ವಕೀಲ ರಜತ್ ನಾಯರ್, ಸಾಲಿಸಿಟರ್ ಜನರಲ್ ಅವರು ಇನ್ನೊಂದು ಪ್ರಕರಣದಲ್ಲಿ ವಾದ ಮಂಡಿಸುತ್ತಿದ್ದು, ಎರಡು ವಾರದ ಮಟ್ಟಿಗೆ ಈ ಪ್ರಕರಣದ ವಿಚಾರಣೆ ಮುಂದೂಡಬೇಕು ಎಂದು ಕೋರಿದರು. ಇದಕ್ಕೆ ಸ್ಪಂದಿಸಿದ ಪೀಠವು ವಿಚಾರಣೆಯನ್ನು ಜ. 31ಕ್ಕೆ ಮುಂದೂಡಿತು.