ನವದೆಹಲಿ : 'ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಎರಡು ಪದವಿ ಕೋರ್ಸ್‌ಗಳನ್ನು ವ್ಯಾಸಂಗ ಮಾಡಲು ಅನುವು ಮಾಡಿಕೊಡುವುದಕ್ಕಾಗಿ ಶಾಸನಬದ್ಧ ಸಂಸ್ಥೆಗಳ ಮೂಲಕ ಕಾರ್ಯವಿಧಾನ ರೂಪಿಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ವಿಶ್ವವಿದ್ಯಾಲಯಗಳಿಗೆ ಸೂಚಿಸಿದೆ' ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
'ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ವಲಸೆ ಹಾಗೂ ವರ್ಗಾವಣೆ ಪ್ರಮಾಣ ಪತ್ರಗಳಿಗಾಗಿ ಒತ್ತಾಯಿಸುತ್ತಿರುವುದರಿಂದ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿರುವುದು ಯುಜಿಸಿ ಗಮನಕ್ಕೆ ಬಂದಿದೆ. ಈ ಪ್ರಮಾಣ ಪತ್ರಗಳನ್ನು ಸಲ್ಲಿಸದಿರುವವರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಏಕಕಾಲದಲ್ಲಿ ಎರಡು ಪದವಿ ಕೋರ್ಸ್ ವ್ಯಾಸಂಗ ಮಾಡುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ' ಎಂದು ಯುಜಿಸಿ ಕಾರ್ಯದರ್ಶಿ ಪಿ.ಕೆ.ಠಾಕೂರ್ ಅವರು ವಿಶ್ವವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
'ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಎರಡು ಪದವಿ ಕೋರ್ಸ್‌ಗಳನ್ನು ವ್ಯಾಸಂಗ ಮಾಡಲು ಅನುವು ಮಾಡಿಕೊಡುವುದಕ್ಕಾಗಿ ವಿಶ್ವವಿದ್ಯಾಲಯಗಳು ತಮ್ಮ ಶಾಸನಬದ್ಧ ಸಂಸ್ಥೆಗಳ ಮೂಲಕ ಕಾರ್ಯವಿಧಾನ ರೂಪಿಸಬೇಕು' ಎಂದೂ ಅವರು ನಿರ್ದೇಶಿಸಿದ್ದಾರೆ.
ವಿದ್ಯಾರ್ಥಿಗಳು ಏಕಕಾಲಕ್ಕೆ ಎರಡು ಪದವಿ ಪಡೆಯುವ ಪ್ರಸ್ತಾವಕ್ಕೆ ಕಳೆದ ವರ್ಷದ ಏಪ್ರಿಲ್‌ನಲ್ಲಿ ಯುಜಿಸಿ ಅನುಮೋದನೆ ನೀಡಿತ್ತು.