ನವದೆಹಲಿ: ದೇಶದಿಂದ ರಫ್ತು ಮಾಡುವ ಎಲ್ಲ ಬಗೆಯ ಮಾಂಸ ಮತ್ತು ಮಾಂಸ ಉತ್ಪನ್ನಗಳ ಹಲಾಲ್ ಪ್ರಮಾಣೀಕರಣಕ್ಕಾಗಿ ಕೇಂದ್ರ ವಾಣಿಜ್ಯ ಸಚಿವಾಲಯವು ಕರಡು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಸಚಿವಾಲಯ ಕರಡು ಮಾರ್ಗಸೂಚಿ ಪ್ರಕಾರ, 'ಹಲಾಲ್ ಪ್ರಮಾಣೀಕೃತ'ವಾದ ಎಲ್ಲ ಬಗೆಯ ಮಾಂಸ ಮತ್ತು ಅದರ ಉತ್ಪನ್ನಗಳು ರಫ್ತು ಮಾಡಬಹುದು.
ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಮಂಡಳಿಯ ಮಾನ್ಯತೆ ಪಡೆದ ಪ್ರಮಾಣೀಕರಣ ಸಂಸ್ಥೆಯು, ಹಲಾಲ್‌ನಡಿ ಉತ್ಪಾದಿಸಿದ, ಸಂಸ್ಕರಿಸಿದ ಮತ್ತು ಪ್ಯಾಕ್ ಮಾಡಿದ ಬಗ್ಗೆ ಮಾನ್ಯತಾ ಪ್ರಮಾಣಪತ್ರ ವಿತರಿಸಲಿದೆ.
ಭಾರತೀಯ ಅನುಸರಣೆ ಮೌಲ್ಯಮಾಪನ ಯೋಜನೆ ( ಐ-ಸಿಎಎಸ್) ಹಲಾಲ್‌ಗೆ ನಿಗದಿಪಡಿಸಿದ ಕಾರ್ಯವಿಧಾನದ ಪ್ರಕಾರ ಪ್ರಮಾಣೀಕರಣ ಸಂಸ್ಥೆಗಳು ಮಾನ್ಯತಾ ಪ್ರಮಾಣ ಪತ್ರ ನೀಡಲಿವೆ. ಇದರ ಮೇಲ್ವಿಚಾರಣಾ ಸಂಸ್ಥೆಯಾಗಿ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಗುರುತಿಸಲಾಗಿದೆ ಎಂದು ಮಾರ್ಗಸೂಚಿಗಳಲ್ಲಿ ಹೇಳಿದೆ.
ವಿದೇಶಿ ವ್ಯಾಪಾರದ ಪ್ರಧಾನ ನಿರ್ದೇಶನಾಲಯ (ಡಿಜಿಎಫ್‌ಟಿ) ಹಲಾಲ್ ಮಾನ್ಯತಾ ಪ್ರಮಾಣ ಪತ್ರದ ಅಗತ್ಯದ ಬಗ್ಗೆ ಸಲ್ಲಿಸಿದ ಪ್ರಸ್ತಾವನೆ ಮೇಲೆ ವಾಣಿಜ್ಯ ಸಚಿವಾಲಯ ಕರಡು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಕರಡು ಮಾರ್ಗಸೂಚಿ ಪರಿಷ್ಕರಣೆಗೆ, ಅಂತಿಮ ಮಾರ್ಗಸೂಚಿ ಪ್ರಕಟಿಸಲು ಸಾರ್ವಜನಿಕ ಮತ್ತು ಕೈಗಾರಿಕಾ ವಲಯದ ಅಭಿಪ್ರಾಯ ಆಹ್ವಾನಿಸಿದ್ದು, ಫೆ.17 ರೊಳಗೆ ಅಭಿಪ್ರಾಯ ಸಲ್ಲಿಸಬಹುದಾಗಿದೆ.
ಜಾಗತಿಕ ಹಲಾಲ್ ಆಹಾರ ಮಾರುಕಟ್ಟೆ ವಹಿವಾಟು 2021ರಲ್ಲಿ 1978 ಶತಕೋಟಿ ಡಾಲರ್ ಇತ್ತು. 2027ರ ವೇಳೆಗೆ ಮಾರುಕಟ್ಟೆ ವಹಿವಾಟು 3,907.7 ಶತಕೋಟಿ ಡಾಲರ್ ತಲುಪುವ ನಿರೀಕ್ಷೆಯಿದೆ. ದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಪ್ರತಿನಿಧಿಸುವ ಭಾರತ ಹಲಾಲ್ ಆಧಾರಿತ ಉದ್ಯಮಗಳಿಗೆ ವಿಪುಲ ಅವಕಾಶಗಳನ್ನು ಒದಗಿಸಲಿದೆ ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.