ಡೆಹ್ರಾಡೂನ್/ಜೋಶಿಮಠ: ಜೋಶಿಮಠದಲ್ಲಿ ಭೂಕುಸಿತ, ಮನೆ ಹಾಗೂ ಮಳಿಗೆಗಳಲ್ಲಿ ಬಿರುಕು ಕಾಣಿಸಿಕೊಳ್ಳುವುದು ಮುಂದುವರಿದಿದ್ದು, ಭಾನುವಾರ ಔಲಿ ರೋಪ್‌ವೇ ಬಳಿ ಅಗಲವಾದ ಬಿರುಕುಗಳು ಕಾಣಿಸಿಕೊಂಡಿದ್ದು, ಇನ್ನೂ ಎರಡು ಹೋಟೆಲ್‌ಗಳು ಪರಸ್ಪರ ಅಪಾಯಕಾರಿಯಾಗಿ ವಾಲುತ್ತಿವೆ.
ಅಲ್ಲದೆ, ಪಟ್ಟಣದ ಮಾರ್ವಾಡಿ ಬಡಾವಣೆಯ ಜೆಪಿ ಕಾಲೋನಿಯಲ್ಲಿ ಭೂಗತ ಕಾಲುವೆ ಒಡೆದಿರುವ ಶಂಕೆ ವ್ಯಕ್ತವಾಗಿದ್ದು, ಕೆಲ ದಿನಗಳ ಹಿಂದೆ ತಾತ್ಕಾಲಿಕವಾಗಿ ತಗ್ಗಿದ ನೀರಿನ ಹರಿವು ಈಗ ಹೆಚ್ಚಾಗಿದೆ.
ಏರಿಳಿತಗೊಂಡಿರುವ ಪ್ರದೇಶದಲ್ಲಿ ನೀರಿನ ಹರಿವಿನ ವೇಗದ ಮೇಲೆ ನಿರಂತರ ನಿಗಾ ವಹಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಕಾರ್ಯದರ್ಶಿ ರಂಜಿತ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.
ಅಸುರಕ್ಷಿತವೆಂದು ಘೋಷಿಸಲಾದ ಪಕ್ಕದ ಎರಡು ಹೋಟೆಲ್‌ಗಳಾದ ಮಲಾರಿ ಇನ್ ಮತ್ತು ಮೌಂಟ್ ವ್ಯೂ ಅನ್ನು ನೆಲಸಮ ಮಾಡುವ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ.
ಈ ಸ್ಥಳದಿಂದ ಸುಮಾರು 100 ಮೀಟರ್‌ಗಳಷ್ಟು ದೂರದಲ್ಲಿ ಇನ್ನೂ ಎರಡು ಹೋಟೆಲ್‌ಗಳು - ಸ್ನೋ ಕ್ರೆಸ್ಟ್ ಮತ್ತು ಕಾಮೆಟ್ ಎಂಬ ಹೋಟೆಲ್ ಗಳು ಪರಸ್ಪರ ಅಪಾಯಕಾರಿಯಾಗಿ ವಾಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವುಗಳಲ್ಲಿದ್ದ ಜನರನ್ನು ತೆರವು ಮಾಡಲಾಗಿದೆ.
"ಮೊದಲು ಈ ಎರಡು ಹೋಟೆಲ್‌ಗಳ ನಡುವಿನ ಅಂತರ ನಾಲ್ಕು ಅಡಿಗಳಷ್ಟು ಇತ್ತು. ಆದರೆ ಈಗ ಅದು ಕೆಲವೇ ಇಂಚುಗಳಿಗೆ ಕಿರಿದಾಗಿದೆ ಮತ್ತು ಅವುಗಳ ಛಾವಣಿಗಳು ಪರಸ್ಪರ ಸ್ಪರ್ಶಿಸುತ್ತಿವೆ" ಎಂದು ಸ್ನೋ ಕ್ರೆಸ್ಟ್ ಮಾಲೀಕರ ಪುತ್ರಿ ಪೂಜಾ ಪ್ರಜಾಪತಿ ಹೇಳಿದ್ದಾರೆ.