ಅಯೋಧ್ಯೆ: ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಇದೀಗ ದೇಗುಲದ ಶ್ರೀರಾಮ-ಸೀತಾಮಾತೆ ಮೂರ್ತಿಗಾಗಿ ನೇಪಾಳದಿಂದ ಬೃಹತ್ ಶಾಲಿಗ್ರಾಮ ಕಲ್ಲುಗಳನ್ನು ಭಾರತಕ್ಕೆ ರವಾನಿಸಲಾಗುತ್ತಿದೆ.
ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಗರ್ಭ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಬೇಕಾದ ಭಗವಾನ್ ಶ್ರೀರಾಮ ಹಾಗೂ ಸೀತಾ ಮಾತೆಯ ಮೂರ್ತಿಗಳ ಕೆತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಶ್ರೀರಾಮ ಹಾಗೂ ಸೀತಾ ಮಾತೆಯ ಪ್ರತಿಮೆಗಳ ಕೆತ್ತನೆಗೆ ನೇಪಾಳ ರಾಜ್ಯದಿಂದ ವಿಶೇಷ ಶಿಲೆ ತರಿಸಿಕೊಳ್ಳಲಾಗುತ್ತಿದ್ದು, 2 ಬೃಹತ್ ಶಾಲಿಗ್ರಾಮ ಕಲ್ಲುಗಳನ್ನು ಭಾರತಕ್ಕೆ ರವಾನೆ ಮಾಡಲಾಗುತ್ತಿದ್ದು, ನೇಪಾಳದ ಗಂಡಕಿ ನದಿಯಲ್ಲಿ ಮಾತ್ರ ವಿಶೇಷ ಶಿಲೆಯನ್ನು ವಿಗ್ರಹ ಕೆತ್ತನೆಗೆ ಬಳಸಲಾಗುತ್ತದೆ.
ಅದರಲ್ಲೂ ನೇಪಾಳದ ಮುಕ್ತಿನಾಥದಲ್ಲಿ ಮಾತ್ರ ಈ ವಿಶೇಷ ಶಾಲಿಗ್ರಾಮ ಶಿಲೆ ಲಭ್ಯವಾಗುತ್ತದೆ. ಕಳೆದ ಬುಧವಾರ ಈ ಶಿಲೆಗಳನ್ನು ಅಯೋಧ್ಯೆಗೆ ರವಾನೆ ಮಾಡಲಾಗಿದೆ. ಈ ವಿಶಿಷ್ಠ ಶಿಲೆಯನ್ನು ಸಾಲಿಗ್ರಾಮ ಶಿಲೆ ಎಂದು ಕರೆಯಲಾಗುತ್ತದೆ. ಸಾಲಿಗ್ರಾಮ ಶಿಲೆಯು ಭಗವಾನ್ ಶ್ರೀ ವಿಷ್ಣುವಿನ ಪ್ರತೀಕ ಎಂದು ನಂಬಲಾಗಿದೆ. ಸಾಮಾನ್ಯವಾಗಿ ಆಸ್ತಿಕರು ತಮ್ಮ ಮನೆಯ ದೇವರ ಕೋಣೆಯಲ್ಲಿ ಸಣ್ಣ ಗಾತ್ರದ ಸಾಲಿಗ್ರಾಮ ಶಿಲೆಯನ್ನು ಇಟ್ಟು ಪೂಜಿಸುತ್ತಾರೆ. ಇದೀಗ ಸಾಲಿಗ್ರಾಮ ಶಿಲೆಯಲ್ಲೇ ಭಗವಾನ್ ಶ್ರೀರಾಮ ಹಾಗೂ ಸೀತಾ ಮಾತೆಯ ಮೂರ್ತಿ ಕೆತ್ತನೆ ಮಾಡಲು ನಿರ್ಧರಿಸಲಾಗಿದ್ದು, ಮುಂದಿನ ವರ್ಷ 2024ರ ಜನವರಿ ವೇಳೆಗೆ ಅಂದರೆ ಮುಂದಿನ ಸಂಕ್ರಾಂತಿ ವೇಳೆಗೆ ಈ ಮೂರ್ತಿಗಳು ಸಿದ್ಧವಾಗಲಿವೆ.
ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಪಂಕಜ್ ಅವರು ನೇಪಾಳದ ಮುಸ್ತಂಗ್‌ನಿಂದ ಭಾರತಕ್ಕೆ ಹೊರಟಿದ್ದು, ಎರಡು ಬೃಹತ್ ವಾಹನಗಳಲ್ಲಿ ಪವಿತ್ರ ಶಿಲೆಗಳನ್ನು ಹೊತ್ತು ಅಯೋಧ್ಯೆಗೆ ತರುತ್ತಿದ್ದಾರೆ. ಶೀಘ್ರವೇ ಎರಡೂ ಪವಿತ್ರ ಶಿಲೆಗಳು ಅಯೋಧ್ಯೆ ತಲುಪಲಿದ್ದು ಎಂದು ರಾಮ ಜನ್ಮ ಭೂಮಿಯ ರಾಮ ಮಂದಿರ ಟ್ರಸ್ಟ್ ಮುಖ್ಯಸ್ಥ ಪ್ರಕಾಶ್ ಗುಪ್ತಾ ಅವರು ಮಾಹಿತಿ ನೀಡಿದ್ದಾರೆ.
ಸಾಲಿಗ್ರಾಮ ಶಿಲೆಯ ವಿಶೇಷತೆ
ಎರಡೂ ಪವಿತ್ರ ಶಿಲೆಗಳು 5 ರಿಂದ 6 ಅಡಿ ಎತ್ತರ ಹಾಗೂ 4 ಅಡಿ ಅಗಲ ಇವೆ. ಈ ಶಿಲೆಗಳಿಂದ
ರಾಮ ಲಲ್ಲಾ ಮೂರ್ತಿಯನ್ನು ಕೆತ್ತನೆ ಮಾಡಲಾಗುವುದು. ನಂತರ ಶ್ರೀರಾಮ ಮಂದಿರದ ಗರ್ಭ
ಗೃಹದಲ್ಲಿ ಈ ಶಿಲೆಗಳನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ರಾಮ
ಮಂದಿರ ಟ್ರಸ್ಟ್ ಮುಖ್ಯಸ್ಥ ಪ್ರಕಾಶ್ ಗುಪ್ತಾ ಅವರು ವಿವರಿಸಿದ್ದಾರೆ.
ಇದೇ ಶಿಲೆಗಳಲ್ಲಿ ಭಗವಾನ್ ಶ್ರೀರಾಮನ ಜೊತೆಯಲ್ಲೇ ಸೀತಾಮಾತೆಯ ವಿಗ್ರಹವನ್ನೂ ಕೆತ್ತನೆ ಮಾಡಲಾಗುವುದು. 2024ರ ಜನವರಿ 14 ರಂದು ಮಕರ ಸಂಕ್ರಾಂತಿ ವೇಳೆ ಅಯೋಧ್ಯಾ ಶ್ರೀರಾಮ ಮಂದಿರದ ಗರ್ಭ ಗುಡಿಯಲ್ಲಿ ಭಗವಾನ್ ಶ್ರೀರಾಮ ಹಾಗೂ ಸೀತಾ ಮಾತೆಯ ಮೂರ್ತಿಗಳ ಪ್ರತಿಷ್ಠಾಪನೆ ಆಗಲಿದೆ. ಗರ್ಭ ಗುಡಿಯಲ್ಲಿ ನೂತನವಾಗಿ ಕೆತ್ತನೆ ಮಾಡಲಾದ ಮೂರ್ತಿಗಳನ್ನೇ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಈ ಹಿಂದೆಯೇ ಟ್ರಸ್ಟ್ ಮಾಹಿತಿ ನೀಡಿತ್ತು.
ನೇಪಾಳದಿಂದ ಹೊರಡುವ ಮುನ್ನವೇ ಪವಿತ್ರ ಶಿಲೆಯ ಶಿಲಾ ಪೂಜೆ ನೆರವೇರಿಸಲಾಗಿದ್ದು, ಎರಡೂ ಶಿಲೆಗಳ ಪೈಕಿ ಒಂದು ಶಿಲೆ 18 ಟನ್ ತೂಕವಿದ್ದರೆ, ಮತ್ತೊಂದು 12 ಟನ್ ತೂಕ ಇದೆ ಎಂದು ಮಾಹಿತಿ ನೀಡಿದ್ದಾರೆ.
ಐತಿಹ್ಯವೇನು?
ರಾಮಾಯಣದಲ್ಲಿ ಉಲ್ಲೇಖವಾಗಿರುವ ಪ್ರಕಾರ, ಸೀತಾ ಮಾತೆಯು ನೇಪಾಳದ ಜನಕ ಮಹಾರಾಜನ ಪುತ್ರಿ.
ಅಯೋಧ್ಯಾ ರಾಮನ ಜೊತೆಗೆ ಸೀತೆಯ ವಿವಾಹ ಆಗುತ್ತದೆ. ಅಯೋಧ್ಯೆಯಲ್ಲಿ ರಾಮ ನವಮಿಯ
ದಿನದಂದು ಶ್ರೀರಾಮನ ಹುಟ್ಟುಹಬ್ಬ ಆಚರಣೆ ಮಾಡುವ ಸಂದರ್ಭದಲ್ಲೇ ನೇಪಾಳದ ಜನಕಪುರದಲ್ಲಿ
ಶ್ರೀರಾಮ ಹಾಗೂ ಸೀತಾ ಮಾತೆಯ ವಿವಾಹ ಮಹೋತ್ಸವದ ಸಂಭ್ರಮಾಚರಣೆಯೂ ನಡೆಯುತ್ತದೆ. ಶುಕ್ಲ
ಪಕ್ಷದ ಐದನೇ ದಿನ ಈ ಆಚರಣೆ ನಡೆಯುತ್ತದೆ. ಕ್ಯಾಲೆಂಡರ್ ಪ್ರಕಾರ ನವೆಂಬರ್ ಅಥವಾ
ಡಿಸೆಂಬರ್ ತಿಂಗಳಲ್ಲಿ ಈ ಆಚರಣೆ ನಡೆಯುತ್ತದೆ.