ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ-ದೆಹಲಿ ಸರ್ಕಾರದ ನಡುವಿನ ಸಂಘರ್ಷ ಮುಂದುವರಿದದ್ದು, ವಿವಾದ ಕುರಿತು ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ತೀರ್ಪನ್ನು ಕಾಯ್ದಿರಿಸುವ ಮೊದಲು ಸುಮಾರು ನಾಲ್ಕೂವರೆ ದಿನಗಳ ಕಾಲ ಕ್ರಮವಾಗಿ ಕೇಂದ್ರ ಮತ್ತು ದೆಹಲಿ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹಿರಿಯ ವಕೀಲ ಎ ಎಂ ಸಿಂಘ್ವಿ ಅವರ ವಾದ-ಪ್ರತಿವಾದಗಳನ್ನು ಆಲಿಸಿತು.
ದೆಹಲಿಯಲ್ಲಿನ ಸೇವೆಗಳ ನಿಯಂತ್ರಣದ ಮೇಲೆ ಕೇಂದ್ರ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ ಶಾಸಕಾಂಗ ಮತ್ತು ಕಾರ್ಯನಿರ್ವಾಹಕ ಅಧಿಕಾರಗಳ ವ್ಯಾಪ್ತಿಗೆ ಸಂಬಂಧಿಸಿದ ಕಾನೂನು ಸಮಸ್ಯೆಯನ್ನು ಆಲಿಸಲು ಸಂವಿಧಾನ ಪೀಠವನ್ನು ಸ್ಥಾಪಿಸಲಾಗಿತ್ತು.
ಮೇ 6 ರಂದು, ದೆಹಲಿಯಲ್ಲಿ ಸೇವೆಗಳ ನಿಯಂತ್ರಣದ ವಿಷಯವನ್ನು ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಸುಪ್ರೀಂ ಕೋರ್ಟ್ ಉಲ್ಲೇಖಿಸಿತ್ತು.
ಈ ಪ್ರಕರಣ ಫೆಬ್ರವರಿ 14, 2019 ರ ವಿಭಜಿತ ತೀರ್ಪಿಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಇಬ್ಬರು ನ್ಯಾಯಾಧೀಶರಾದ ಎ ಕೆ ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರು ಈಗ ನಿವೃತ್ತರಾಗಿರುವ ಇಬ್ಬರು ನ್ಯಾಯಮೂರ್ತಿಗಳ ಪೀಠವು ಮೂರು ನ್ಯಾಯಾಧೀಶರನ್ನು ಭಾರತದ ಮುಖ್ಯ ನ್ಯಾಯಮೂರ್ತಿಗೆ ಶಿಫಾರಸು ಮಾಡಿತ್ತು. ರಾಷ್ಟ್ರ ರಾಜಧಾನಿಯಲ್ಲಿನ ಸೇವೆಗಳ ನಿಯಂತ್ರಣದ ಸಮಸ್ಯೆಯನ್ನು ಅಂತಿಮವಾಗಿ ನಿರ್ಧರಿಸಲು ಐವರು ನ್ಯಾಯಾಧೀಶರನ್ನೊಳಗೊಂಡ ಪೀಠವನ್ನು ಸ್ಥಾಪಿಸಲಾಯಿತು.
ನ್ಯಾಯಮೂರ್ತಿ ಭೂಷಣ್ ಅವರು ದೆಹಲಿ ಸರ್ಕಾರಕ್ಕೆ ಆಡಳಿತಾತ್ಮಕ ಸೇವೆಗಳ ಮೇಲೆ ಯಾವುದೇ ಅಧಿಕಾರವಿಲ್ಲ ಎಂದು ತೀರ್ಪು ನೀಡಿದ್ದರು, ಆದರೆ ನ್ಯಾಯಮೂರ್ತಿ ಸಿಕ್ರಿ ವಿಭಿನ್ನ ತೀರ್ಪು ಕೊಟ್ಟಿದ್ದರು.
ಅಧಿಕಾರಶಾಹಿಯ ಉನ್ನತ ಮಟ್ಟದ (ಜಂಟಿ ನಿರ್ದೇಶಕ ಮತ್ತು ಮೇಲಿನ) ಅಧಿಕಾರಿಗಳ ವರ್ಗಾವಣೆ ಅಥವಾ ನೇಮಕಾತಿಯನ್ನು ಕೇಂದ್ರ ಸರ್ಕಾರದಿಂದ ಮಾತ್ರ ಮಾಡಬಹುದಾಗಿದೆ. ಇತರ ಅಧಿಕಾರಿಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರ ಅಭಿಪ್ರಾಯವು ಮೇಲುಗೈ ಸಾಧಿಸುತ್ತದೆ ಹೇಳಿದ್ದರು.
2018 ರ ತೀರ್ಪಿನಲ್ಲಿ, ಐದು ನ್ಯಾಯಾಧೀಶರ ಸಂವಿಧಾನ ಪೀಠವು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರು ಚುನಾಯಿತ ಸರ್ಕಾರದ ಸಹಾಯ ಮತ್ತು ಸಲಹೆಗೆ ಬದ್ಧರಾಗಿದ್ದಾರೆ. ಇಬ್ಬರೂ ಪರಸ್ಪರ ಸಾಮರಸ್ಯದಿಂದ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿತ್ತು.