ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಸಂಸ್ಥೆಯು ದೇಶದಲ್ಲಿರುವ ನಿರುದ್ಯೋಗದ ಕುರಿತು ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿಅಂಶ ಕಳವಳ ಮೂಡಿಸುವಂತಿದೆ. 2022ರ ಡಿಸೆಂಬರ್ ತಿಂಗಳಲ್ಲಿ ನಿರುದ್ಯೋಗ ಪ್ರಮಾಣವು ಶೇಕಡ 8.30ಕ್ಕೆ ಏರಿಕೆಯಾಗಿದೆ.
ಇದು 16 ತಿಂಗಳಲ್ಲಿಯೇ ಗರಿಷ್ಠ. ನವೆಂಬರ್ ತಿಂಗಳಲ್ಲಿ ನಿರುದ್ಯೋಗ ಪ್ರಮಾಣವು ಶೇ 8ರಷ್ಟಿತ್ತು. ನಗರ ಪ್ರದೇಶಗಳಲ್ಲಿನ ನಿರುದ್ಯೋಗ ಪ್ರಮಾಣವು ನವೆಂಬರ್ ತಿಂಗಳಲ್ಲಿ ಶೇ 8.96ರಷ್ಟು ಇದ್ದುದು ಡಿಸೆಂಬರ್‌ನಲ್ಲಿ ಶೇ 10.09ಕ್ಕೆ ಏರಿಕೆಯಾಗಿದೆ. ಆದರೆ ಗ್ರಾಮೀಣ ಪ್ರದೇಶದ ನಿರುದ್ಯೋಗ ಪ್ರಮಾಣವು ಇದೇ ಅವಧಿಯಲ್ಲಿ ಶೇ 7.55ರಿಂದ ಶೇ 7.44ಕ್ಕೆ ಇಳಿಕೆಯಾಗಿದೆ. ರಾಜ್ಯಗಳಲ್ಲಿ ನಿರುದ್ಯೋಗವು ಯಾವ ಪ್ರಮಾಣದಲ್ಲಿದೆ ಎಂಬ ಅಂಕಿಅಂಶಗಳನ್ನೂ ಸಿಎಂಐಇ ನೀಡಿದೆ. ರಾಜಸ್ಥಾನದಲ್ಲಿ ಶೇ 28.5ರಷ್ಟು ಮತ್ತು ದೆಹಲಿಯಲ್ಲಿ ಶೇ 20.8ರಷ್ಟು ನಿರುದ್ಯೋಗ ಇದೆ ಎಂದು ಈ ಅಂಕಿಅಂಶ ತಿಳಿಸಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ತ್ರೈಮಾಸಿಕ ದತ್ತಾಂಶದ ಪ್ರಕಾರ, ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿರುದ್ಯೋಗವು ಶೇ 7.2ರಷ್ಟಿತ್ತು. ಅದಕ್ಕೂ ಹಿಂದಿನ ತ್ರೈಮಾಸಿಕದಲ್ಲಿ ನಿರುದ್ಯೋಗ ಪ್ರಮಾಣವು ಶೇ 7.6ರಷ್ಟಿತ್ತು. ಆದರೆ, ನಿರುದ್ಯೋಗ ಪ್ರಮಾಣದಲ್ಲಿ ಆಗಿರುವ ಈ ಇಳಿಕೆಯು ತಾತ್ಕಾಲಿಕ ಶಮನ ಮಾತ್ರ ಎಂಬಂತೆ ಕಾಣುತ್ತಿದೆ.
ಬೆಳೆಯುತ್ತಿರುವ ಅರ್ಥ ವ್ಯವಸ್ಥೆಯ ನಿರಂತರ ಲಕ್ಷಣವಾಗಿ ನಿರುದ್ಯೋಗ ಏರಿಕೆಯು ಕೆಲವು ವರ್ಷಗಳಿಂದ ಇದೆ. ಅಂದರೆ, ಆರ್ಥಿಕ ಪ್ರಗತಿಯು ಅದೇ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ. ಎನ್‌ಎಸ್‌ಒ ದತ್ತಾಂಶದ ಪ್ರಕಾರ, 2005ರಿಂದ 2012ರ ನಡುವಣ ಅವಧಿಯಲ್ಲಿ ಪ್ರತಿವರ್ಷ 75 ಲಕ್ಷ ಕೃಷಿಯೇತರ ಉದ್ಯೋಗಗಳು ಸೃಷ್ಟಿಯಾಗಿದ್ದವು. ಆದರೆ, 2013-2019ರ ಅವಧಿಯಲ್ಲಿ ಪ್ರತಿವರ್ಷ ಸೃಷ್ಟಿಯಾಗಿರುವ ಉದ್ಯೋಗಗಳು 29 ಲಕ್ಷ ಮಾತ್ರ. ನಿರುದ್ಯೋಗಿಗಳ ಗುಂಪಿಗೆ ಲಕ್ಷಾಂತರ ಯುವಜನರು ಪ್ರತಿವರ್ಷ ಸೇರ್ಪಡೆಯಾಗುತ್ತಿದ್ದಾರೆ. ಹಾಗಾಗಿ, ಭಾರತದಂತಹ ದೇಶದಲ್ಲಿ ಉದ್ಯೋಗ ಸೃಷ್ಟಿ ಅತ್ಯಂತ ಮಹತ್ವದ್ದಾಗಿದೆ. 2016ರ ನವೆಂಬರ್‌ನಲ್ಲಿ ಮಾಡಲಾದ ನೋಟು ರದ್ದತಿಯಿಂದಾಗಿ ನಿರುದ್ಯೋಗ ಗಗನಕ್ಕೆ ಏರಿತ್ತು. 2018ರಲ್ಲಿ ನಿರುದ್ಯೋಗ ಪ್ರಮಾಣವು 45 ವರ್ಷಗಳಲ್ಲಿಯೇ ಗರಿಷ್ಠ ಮಟ್ಟ ತಲುಪಿ ಆಘಾತ ಮೂಡಿಸಿತ್ತು. 2020ರ ಬಳಿಕ, ಕೋವಿಡ್ ಸಾಂಕ್ರಾಮಿಕವು ಪರಿಸ್ಥಿತಿಯು ಇನ್ನಷ್ಟು ಹದಗೆಡುವಂತೆ ಮಾಡಿತು. ಸಾಂಕ್ರಾಮಿಕವು ತೀವ್ರವಾಗಿದ್ದ ಅವಧಿಯಲ್ಲಿ ಕನಿಷ್ಠ ಒಂದು ಕೋಟಿ ಉದ್ಯೋಗಗಳು ನಷ್ಟವಾಗಿದ್ದವು.
ಸಾಂಕ್ರಾಮಿಕದ ನಂತರ, ಅರ್ಥ ವ್ಯವಸ್ಥೆಯು ಚೇತರಿಕೆಯ ಹಾದಿ ಹಿಡಿದರೂ ಉದ್ಯೋಗ ಸೃಷ್ಟಿಗೆ ಹೆಚ್ಚಿನ ನೆರವು ನೀಡಿಲ್ಲ ಎಂಬುದನ್ನು ದತ್ತಾಂಶಗಳು ತೋರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಕಡಿಮೆಯಾಗಿದೆ ಎಂಬುದು ಕೂಡ ಆರೋಗ್ಯಕರ ಅಂಶ ಅಲ್ಲ. ಅರ್ಥ ವ್ಯವಸ್ಥೆಯ ಬೆಳವಣಿಗೆಯು ನಗರ ಪ್ರದೇಶಗಳಲ್ಲಿ ಹೆಚ್ಚು ಉದ್ಯೋಗ ಸೃಷ್ಟಿ ಮಾಡುತ್ತದೆ. ನಗರ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಯಾಗದ ಕಾರಣಕ್ಕೆ ಜನರು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಕಂಡುಕೊಂಡಿರುವುದೇ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆಯಾಗಲು ಕಾರಣ. 2019 ಮತ್ತು 2020ರಲ್ಲಿ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಜನರ ಸಂಖ್ಯೆಯು 20 ಕೋಟಿಯಿಂದ 23.2 ಕೋಟಿಗೆ ಏರಿಕೆಯಾಗಿತ್ತು. ವಲಸೆ ಕಾರ್ಮಿಕರು ತಾವಿದ್ದ ರಾಜ್ಯಗಳಿಂದ ತಮ್ಮ ತವರು ರಾಜ್ಯಗಳಿಗೆ ಮರಳಿದ್ದು ಇದಕ್ಕೆ ಕಾರಣ ಆಗಿರಬಹುದು. ಇದರ ಪರಿಣಾಮವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೂಲಿಯಲ್ಲಿ ಇಳಿಕೆ ಆಗಿತ್ತು. 2005-2012ರ ನಡುವಣ ಅವಧಿಯಲ್ಲಿ ಕೃಷಿ ಕ್ಷೇತ್ರದ ಉದ್ಯೋಗವು 3.7 ಕೋಟಿಯಷ್ಟು ಕಡಿಮೆ ಆಗಿತ್ತು. ಆದರೆ, ಕೃಷಿಯೇತರ ಕ್ಷೇತ್ರಗಳ ಉದ್ಯೋಗಗಳು ಪ್ರತಿವರ್ಷ 75 ಲಕ್ಷಗಳಷ್ಟು ಏರಿಕೆಯಾಗಿದ್ದವು. ಇದರ ಪರಿಣಾಮವಾಗಿ ಸಂಬಳದಲ್ಲಿ ಏರಿಕೆ ಉಂಟಾಗಿತ್ತು ಮತ್ತು ಬಡವರ ಸಂಖ್ಯೆಯಲ್ಲಿ ಇಳಿಕೆ ಆಗಿತ್ತು. ತಯಾರಿಕೆ ಮತ್ತು ಕೃಷಿಯೇತರ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿಸಿ 2005-2012ರ ಅವಧಿಯ ಸನ್ನಿವೇಶವನ್ನು ಮರಳಿ ತರಬೇಕಾಗಿದೆ. ಜಾಗತಿಕವಾಗಿ ಮತ್ತು ದೇಶೀಯವಾಗಿ ಹಲವು ಹೊಸ ಹೊಸ ಸವಾಲುಗಳು ಎದುರಾಗುತ್ತಿರುವ ಈಗಿನ ಸನ್ನಿವೇಶದಲ್ಲಿ ವಿಶೇಷ ಗಮನ ಮತ್ತು ಕಾರ್ಯತಂತ್ರಗಳ ಮೂಲಕ ಉದ್ಯೋಗ ಸೃಷ್ಟಿಸಬೇಕಾದ ಜರೂರು ಬಹಳ ಇದೆ.