ನವದೆಹಲಿ: ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಈ ವರ್ಷ 74ನೇ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಅವರು ಜನವರಿ 26ರಂದು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಆಗಮಿಸುತ್ತಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಅರಬ್ ರಿಪಬ್ಲಿಕ್ ದೇಶ ಈಜಿಪ್ಟ್ ನ ಅಧ್ಯಕ್ಷರು ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು. ಈಜಿಪ್ಟ್ ಸೇನೆಯ ಮಿಲಿಟರಿ ಪಡೆ ಸಹ ಭಾರತದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗಿಯಾಗಲಿದೆ ಎಂದು ಹೇಳಿದೆ.
ತಮ್ಮ ಭಾರತ ಭೇಟಿ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಇಲ್ಲಿನ ಉದ್ಯಮ ಸಮುದಾಯವನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಅವರ ಡೊತೆ ಈಜಿಪ್ಟ್ ನ ಉನ್ನತ ಮಟ್ಟದ ನಿಯೋಗ ಆಗಮಿಸಲಿದೆ. 68 ವರ್ಷದ ಈಜಿಪ್ಟ್ ಅಧ್ಯಕ್ಷರು ಭಾರತಕ್ಕೆ ಇದೇ 24ರಂದು ಆಗಮಿಸಲಿದ್ದು ಅವರ ಭೇಟಿ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಸಹಾಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.