ನವದೆಹಲಿ: 'ಭಾರತ-ಚೀನಾ ಗಡಿ ಪರಿಸ್ಥಿತಿಯು 'ಸ್ಥಿರ'ವಾಗಿದೆ. ಆದರೆ, ಏನನ್ನೂ ಊಹಿಸಲಾಗದ ಸ್ಥಿತಿಯಲ್ಲಿದೆ. ಆದ್ದರಿಂದ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಮ್ಮ ಸೇನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ' ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಗುರುವಾರ ಹೇಳಿದರು.
ಸೇನಾ ದಿನದ ಅಂಗವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಶತ್ರುವಿನ ಯಾವುದೇ ರೀತಿಯ ದಾಳಿಯನ್ನು ಎದುರಿಸಲು ವಾಸ್ತವ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಸೈನಿಕರು ಸನ್ನದ್ಧ ಸ್ಥಿತಿಯಲ್ಲಿದ್ದಾರೆ' ಎಂದರು.
'ಭಾರತ-ಚೀನಾ ಮಧ್ಯೆ ಇರುವ ಏಳು ತಕರಾರುಗಳಲ್ಲಿ ಐದನ್ನು ಬಗೆಹರಿಸಿಕೊಂಡಿದ್ದೇವೆ. ಉಳಿದ ಎರಡನ್ನು ಬಗೆಹರಿಸಿಕೊಳ್ಳಲು ಸೇನಾ ಹಾಗೂ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಿವೆ' ಎಂದರು.