ಚಂಡೀಗಢ: ವೈವಾಹಿಕ ಕಲಹದಿಂದ ಬೇಸತ್ತು ಸೇನೆಯ ಲೆಫ್ಟಿನೆಂಟ್ ಕರ್ನಲ್ ಒಬ್ಬರು ಭಾನುವಾರ ರಾತ್ರಿ ತಮ್ಮ ಪತ್ನಿಯನ್ನು ಗುಂಡಿಕ್ಕಿ ಕೊಂದು, ಬಳಿಕ ತಾವೂ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಫಿರೋಜ್‌ಪುರ ಕಂಟೋನ್ಮೆಂಟ್‌ನಲ್ಲಿ ನಡೆದಿದೆ.
ಮೃತ ಅಧಿಕಾರಿಯನ್ನು ಲೆಫ್ಟಿನೆಂಟ್ ಕರ್ನಲ್ ನಿಶಾಂತ್ ಪರ್ಮಾರ್ ಮತ್ತು ಅವರ ಪತ್ನಿ ಡಿಂಪಲ್ ಎಂದು ಗುರುತಿಸಲಾಗಿದೆ. ದಂಪತಿಗೆ ಒಬ್ಬನೇ ಒಬ್ಬ ಮಗನಿದ್ದು, ಮಗನೂ ಅವರೊಂದಿಗೆ ವಾಸಿಸುತ್ತಿರಲಿಲ್ಲ. ಡಿಂಪಲ್ ಅವರು ನಿಶಾಂತ್ ಗೆ ಎರಡನೇ ಪತ್ನಿ ಎಂದು ತಿಳಿದು ಬಂದಿದೆ.
ಲೆಫ್ಟಿನೆಂಟ್ ಕರ್ನಲ್ ನಿಶಾಂತ್ ಅವರು ಫಿರೋಜ್‌ಪುರ ಕಂಟೋನ್ಮೆಂಟ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಭಾನುವಾರ ರಾತ್ರಿ 42 ವರ್ಷದ ಪತ್ನಿ ಡಿಂಪಲ್(ಗೃಹಿಣಿ) ಅವರ ತಲೆಗೆ ಗುಂಡು ಹಾರಿಸಿ ನಂತರ ಕತ್ತು ಹಿಸುಕಿ ಹತ್ಯೆಗೈದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಂತರ ಅಧಿಕಾರಿಯು ತನ್ನ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಕುರಿತು ಸೇನಾ ಅಧಿಕಾರಿಗಳು ಮತ್ತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ನಡುವೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ.