ನವದೆಹಲಿ: ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಯತ್ನಿಸಿದ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸುವಲ್ಲಿ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್ಎಫ್) ಯಶಸ್ವಿಯಾಗಿದೆ.
ಪಂಜಾಬ್ನ ಗುರುದಾಸ್ಪುರ್ನದಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿರುವುದಾಗಿ ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಚೀನಾ ನಿರ್ಮಿತ ಪಿಸ್ತೂಲ್‌ಗಳು ಹಾಗೂ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, 2023ರ ಜನವರಿ 17 ಮತ್ತು 18ರ ರಾತ್ರಿ ಗುರುದಾಸ್ಪುರದ ಉಂಚ ತಕ್ಲಾ ಗ್ರಾಮದ ಹೊರವಲಯದಲ್ಲಿ ಬಿಎಸ್ಎಫ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಪಾಕಿಸ್ತಾನದ ಕಡೆಯಿಂದ ಸದ್ದು ಕೇಳಿಸಿದ್ದು, ಡ್ರೋಣ್ ಸದ್ದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಬಿಎಸ್ಎಫ್ ಆ ದಿಕ್ಕಿನತ್ತ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯ ವೇಳೆ ಏನೋ ಒಂದು ವಸ್ತು ಕೆಳಗೆ ಬಿದ್ದಿತ್ತು. ವಸ್ತು ಬಿದ್ದ ಈ ಪ್ರದೇಶದಲ್ಲಿ ಹುಡುಕಾಟ ನಡೆಸಲಾಯಿತು.
ಈ ಸಂದರ್ಭದಲ್ಲಿ ಉಂಚ ತಕ್ಲಾ ಗ್ರಾಮದಲ್ಲಿ ಕೆಲವು ಮರದ ಬಾಕ್ಸ್ನಲ್ಲಿ ಪ್ಯಾಕೆಟ್ಗಳು ಪತ್ತೆಯಾದವು. ಪ್ಯಾಕೆಟ್ ತೆರೆದಾಗ ಚೀನಾ ನಿರ್ಮಿತವಾದ 4 ಪಿಸ್ತೂಲ್, 8 ಮ್ಯಾಗಜೀನ್ ಮತ್ತು 47 ಗುಂಡುಗಳು ದೊರೆತಿದೆ ಎಂದು ಮಾಹಿತಿ ನೀಡಿದ್ದಾರೆ.