ನವದೆಹಲಿ: ಸಾರ್ವಜನಿಕ ಬದುಕಿನಲ್ಲಿರುವ ಜನಪ್ರತಿನಿಧಿಗಳ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಮೇಲೆ ಹೆಚ್ಚಿನ ನಿರ್ಬಂಧ ವಿಧಿಸಬಹುದೇ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸಿದೆ. ಸಂವಿಧಾನದ 19 (2) ರ ಅಡಿಯಲ್ಲಿ ಸೂಚಿಸಲಾದ ನಿರ್ಬಂಧಗಳನ್ನು ಹೊರತುಪಡಿಸಿ ಹೆಚ್ಚಿನ ನಿರ್ಬಂಧ ವಿಧಿಸಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್, ಬಿ.ಆರ್. ಗವಾಯಿ, ಎ.ಎಸ್. ಬೋಪಣ್ಣ, ವಿ. ರಾಮಸುಬ್ರಮಣಿಯನ್, ಬಿ.ವಿ. ನಾಗರತ್ನ ಅವರಿರುವ ಪೀಠವು ಈ ತೀರ್ಪು ಪ್ರಕಟಿಸಿದೆ.
ಸಚಿವರು ನೀಡಿದ ಹೇಳಿಕೆಯನ್ನು ಸರ್ಕಾರದ ಮೇಲೆ ಆರೋಪಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಸಚಿವ ತನ್ನ ಹೇಳಿಕೆಗೆ ತಾನೇ ಹೊಣೆಗಾರನಾಗಿರುತ್ತಾನೆ ಎಂದು ತಿಳಿಸಿತು.
ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು, ಬಹುಮತದ ತೀರ್ಪಿಗೆ ಭಿನ್ನವಾದ ನಿಲುವನ್ನು ಇಲ್ಲಿಯೂ ತಳೆದರು. ಸರ್ಕಾರಕ್ಕೆ ಸಂಬಂಧಿಸಿದ ಅಥವಾ ಸರ್ಕಾರವನ್ನು ರಕ್ಷಿಸುವ ಸಚಿವರ ಹೇಳಿಕೆಗಳು ಒಂದು ವೇಳೆ ಅವಹೇಳಕಾರಿಯಾಗಿದ್ದರೆ, ಅದಕ್ಕೆ ಸರ್ಕಾರವೇ ಜವಾಬ್ದಾರಿಯಾಗಿರಲಿದೆ ಎಂದು ತಿಳಿಸಿದರು. ಆದರೆ, ಈಗಿರುವ ನಿರ್ಬಂಧಗಳಿಗೆ ಮಿಗಿಲಾಗಿ ಹೆಚ್ಚಿನ ನಿರ್ಬಂಧ ವಿಧಿಸಲು ಸಾಧ್ಯವಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ, ನೋಟು ಅಮಾನ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲೂ ಅವರು ಭಿನ್ನಮತದ ತೀರ್ಪು ನೀಡಿದ್ದರು. ನೋಟು ರದ್ದತಿ ಕಾನೂನು ಬಾಹಿರ ಎಂದು ಅವರು ತಿಳಿಸಿದ್ದರು.