ಪಾಟ್ನಾ: ಬಿಹಾರದ ಭಾಗಲ್ಪುರ ಕೇಂದ್ರ ಕಾರಾಗೃಹದಲ್ಲಿರುವ ಕೊಲೆ ಅಪರಾಧಿಯೊಬ್ಬ ರಾಮಚರಿತಮಾನಸ ಮಹಾಕಾವ್ಯವನ್ನು 'ಅಂಗಿಕ' ಭಾಷೆಗೆ ಅನುವಾದಿಸಿದ್ದಾರೆ.
ಆಂಗಿಕ ಭಾಷೆ ಬಿಹಾರ ರಾಜ್ಯದ ಭಾಗಲ್ಪುರ, ಮುಂಗೇರ್ ಮತ್ತು ಬಂಕಾ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿದೆ.
ಮುಂಗೇರ್ ಜಿಲ್ಲೆಯವರೇ ಆಗಿರುವ ಹರಿಹರ ಪ್ರಸಾದ್ ಅವರು ಕೊಲೆ ಪ್ರಕರಣವೊಂದರಲ್ಲಿ ಅಪರಾಧಿಯಾಗಿದ್ದು, ಜೈಲುವಾಸದಲ್ಲಿರುವ ಅವರು, ರಾಮಚರಿತಮಾನಸ ಮಹಾಕಾವ್ಯವನ್ನು 'ಆಂಗಿಕ' ಭಾಷೆಗೆ ಅನುವಾದಿಸಿದ್ದಾರೆ.
ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಹರಿಹರ ಪ್ರಸಾದ್ ಅವರು 2016ರಿಂದಲೂ ಭಾಗಲ್ಪುರ ವಿಶೇಷ ಕಾರಾಗೃಹದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ. ರಾಮಚರಿತಮಾನಸ ಮಹಾಕಾವ್ಯದ ಅನುವಾದವನ್ನು ಹರಿಹರ ಪ್ರಸಾದ್ ಅವರು ಪೂರ್ಣಗೊಳಿಸಿದ್ದು, ಮಹಾಕಾವ್ಯದ ಅನುವಾದಿತ ಕೃತಿಯ ಪ್ರೂಫ್ ರೀಡಿಂಗ್ ಅನ್ನು ಜೈಲರ್ ಮನೋಜ್ ಕುಮಾರ್ ಮಾಡುತ್ತಿದ್ದಾರೆ.
ಈ ನಡುವೆ ಹರಿಹರ ಅವರು ಶಿಕ್ಷೆ ಹಿಂಪಡೆದುಕೊಳ್ಳುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮುಯವರಿ ಬರೆದಿದ್ದು, ಮನವಿ ಮಾಡಿಕೊಂಡಿದ್ದಾರೆ.
ಹರಿಹರ ಪ್ರಸಾದ್ ಅವರಿಗೆ ತಮ್ಮ ಭಾಷೆಯ ಮೇಲಿನ ಉತ್ತಮ ಹಿಡಿತವಿದ್ದು, ಇದರಿಂದ ಪ್ರಭಾವಿತರಾದ ಮಾಜಿ ಜೈಲರ್ ರಾಕೇಶ್ ಕುಮಾರ್ ಸಿಂಗ್ ಅವರು ರಾಮಚರಿತಮಾನಸ ಮಹಾಕಾವ್ಯವನ್ನು ಅಂಗಿಕ ಭಾಷಣೆಗೆ ಅನುವಾದ ಮಾಡಲು ಪ್ರೇರೇಪಿಸಿದ್ದರು. ಸಿಂಗ್ ವರ್ಗಾವಣೆಯಾದ ಬಳಿಕ ಮನೋಜ್ ಕುಮಾರ್ ಅವರು ಅನುವಾದ ಕಾರ್ಯ ಮುಂದುವರೆಸುವಂತೆ ಮನವೊಲಿಸಿದ್ದರು. ಬಳಿಕ ಭಾಷಾಂತರಕ್ಕೆ ಪ್ರಸಾದ್ ಅವರಿಗೆ ಲೇಖನಿ ಹಾಗೂ ಕಾಗದಗಳನ್ನು ಒದಗಿಸಿದರು. ಇದೀಗ ಹರಿಹರ ಪ್ರಸಾದ್ ಅವರು ಅನುವಾದಿಕ ಕೃತಿಯನ್ನು ಜೈಲು ಮುದ್ರಣಾಲಯವೇ ಪ್ರಕಟ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಹರಿಹರ ಪ್ರಸಾದ್ ಅವರು ಇರುವ ಕಾರಾಗೃಹದಲ್ಲಿ ಮಾವೋವಾದಿಗಳು, ಕುಖ್ಯಾತ ದರೋಡೆಕೋರರಿದ್ದು, ಸಹ ಕೈದಿಗಳೊಂದಿಗಿನ ಉತ್ತಮ ನಡವಳಿಕೆಯಿಂದ ಹರಿಹರ ಪ್ರಸಾದ್ ಅವರು ಜೈಲಿನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹರಿಹರ ಪ್ರಸಾದ್ ಅವರು 'ಪೀತಾಂಬರಿ' (ಧಾರ್ಮಿಕ ಮಹತ್ವವುಳ್ಳ ಹಳದಿ ಬಟ್ಟೆ) ಧರಿಸುತ್ತಿದ್ದು, ವೇದಿಕೆ ಮೇಲೆ ಕುಳಿತು ಇತರ ಕೈದಿಗಳು ತಾಳ್ಮೆಯಿಂದ ಕೇಳುವಂತೆ ರಾಮಚರಿತಮಾನಸವನ್ನು ಪಠಿಸುತ್ತಾರೆ. ಇವರ ಈ ಕಾರ್ಯದಿಂದ ಜೈಲಿನ ಸಂಪೂರ್ಣ ವಾತಾವರಣವೇ ಬದಲಾಗಿದೆ ಎಂದು ಜೈಲರ್ ಮನೋಜ್ ಅವರು ಹೇಳಿದ್ದಾರೆ.
3,288 ಮಂದಿ ಕೈದಿಗಳ ಸಾಮರ್ಥ್ಯ ಇರುವ ವಿಶೇಷ ಕಾರಾಗೃಹದಲ್ಲಿ 1,700 ಕೈದಿಗಳಿದ್ದು, ಜೈಲಿನಲ್ಲಿ ಕೈಜಿಗಳಿಗೆ ಶಿಕ್ಷಣವನ್ನು ಒದಗಿಸಲಾಗುತ್ತಿದೆ. ಇಲ್ಲದೆ, ಇದಕ್ಕಾಗಿ ಅಗತ್ಯವಿರುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಕೈದಿಗಳಿಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್, ಬಿಹಾರ ಬೋರ್ಡ್ ಆಫ್ ಓಪನ್ ಸ್ಕೂಲಿಂಗ್ ಮತ್ತು ಎಕ್ಸಾಮಿನೇಷನ್, ನಳಂದ ಮುಕ್ತ ವಿಶ್ವವಿದ್ಯಾಲಯ ಮೂಲಕ ಶಿಕ್ಷಣದ ಸೌಲಭ್ಯವನ್ನು ಒದಗಿಸಲಾಗುತ್ತದೆ. ಅದಲ್ಲದೆ, ಎನ್‌ಜಿಒಗಳು ಕೂಡ ಬಿಹಾರದ ಜೈಲುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ.