ನವದೆಹಲಿ : ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಆರೆಸ್ಸೆಸ್ ಸಿದ್ಧಾಂತವನ್ನು ವಿರೋಧಿಸಿದ್ದರು ಎಂದು ಅವರ ಪುತ್ರಿ ಅನಿತಾ ಬೋಸ್ ಅವರು ಹೇಳಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯನ್ನು ಜನವರಿ 23ರಂದು ಆಚರಿಸಲು ಯೋಜಿಸಿರುವ ಬಗ್ಗೆ ಆರೆಸ್ಸೆಸ್ ಅನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
''ನನ್ನ ತಂದೆ ಹಿಂದೂ ಧರ್ಮದ ಓರ್ವ ವ್ಯಕ್ತಿಯಾಗಿದ್ದರು. ಆದರೆ, ಅವರು ಎಲ್ಲ ಧರ್ಮಗಳಿಗೆ ಗೌರವ ನೀಡುತ್ತಿದ್ದರು. ಎಲ್ಲರೂ ಒಟ್ಟಿಗೆ ಬದುಕಬಹುದು ಎಂದು ಅವರು ನಂಬಿದ್ದರು. ಆರೆಸ್ಸೆಸ್‌ಗೆ ಈ ಬಗ್ಗೆ ನಂಬಿಕೆ ಇದೆ ಎಂದು ನಾನು ಭಾವಿಸಲಾರೆ'' ಎಂದು ಅವರು ಹೇಳಿದ್ದಾರೆ. ''ಆರೆಸ್ಸೆಸ್ ನೇತಾಜಿ ಅವರ ಸಿದ್ಧಾಂತವನ್ನು ಅಳವಡಿಸಿಕೊಳ್ಳಲು ಆರಂಭಿಸಿದರೆ, ಅದು ಭಾರತಕ್ಕೆ ಉತ್ತಮ.
ನೇತಾಜಿ ಜಾತ್ಯತೀತತೆಯ ಬಗ್ಗೆ ನಂಬಿಕೆ ಇರಿಸಿದ್ದರು. ಆದರೆ, ಆರೆಸ್ಸೆಸ್ ಅದನ್ನು ಅನುಸರಿಸುತ್ತದೆ ಎಂದು ನನಗೆ ಖಚಿತತೆ ಇಲ್ಲ. ಆರೆಸ್ಸೆಸ್ ಹಿಂದೂ ರಾಷ್ಟ್ರೀಯವಾದಿ ವಿಚಾರಗಳನ್ನು ಪ್ರತಿಪಾದಿಸಲು ಬಯಸಿದರೆ, ಅದು ನೇತಾಜಿ ಅವರ ಸಿದ್ಧಾಂತಕ್ಕೆ ಹೊಂದಿಕೆಯಾಗುವುದಿಲ್ಲ. ಅದಕ್ಕಾಗಿ ನೇತಾಜಿಯನ್ನು ಬಳಸಿಕೊಂಡರೆ ನಾನು ಅದನ್ನು ಪ್ರಶಂಸಿಸುವುದಿಲ್ಲ'' ಎಂದು ಅವರು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಆರೆಸ್ಸೆಸ್‌ನ ಅಜಯ್ ನಂದಿ, ನೇತಾಜಿ ಅವರು ಆರೆಸ್ಸೆಸ್ ಅನ್ನು ಟೀಕಿಸಿದ್ದರು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದಿದ್ದಾರೆ.
ಸುಭಾಷ್ ಚಂದ್ರ ಬೋಸ್ ಪುತ್ರಿ ಅನಿತಾ ಬೋಸ್ ಆರೆಸ್ಸೆಸ್ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 126ನೇ ಜನ್ಮ ದಿನಾಚರಣೆಯನ್ನು ಕೋಲ್ಕತ್ತಾದ ಶಹೀದ್ ಮಿನಾರ್‌ನಲ್ಲಿ ಆಚರಿಸಲಿದೆ. ಈ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದಾರೆ.