ಪಾಣಿಪತ್ : ಅಗ್ನಿಪಥ ಯೋಜನೆ ಹಾಗೂ ಜಿಎಸ್‌ಟಿ ವಿಷಯ ಸೇರಿದಂತೆ ಅನೇಕ ವಿಷಯಗಳ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಶುಕ್ರವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
'ಭಾರತ್ ಜೋಡೊ ಯಾತ್ರೆ'ಯ ಭಾಗವಾಗಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 'ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎರಡು ರೀತಿಯ ಭಾರತಗಳು ಅಸ್ತಿತ್ವದಲ್ಲಿವೆ.
ಒಂದು ರೈತರು, ಕೃಷಿಕರು, ಸಣ್ಣ ಅಂಗಡಿಗಳವರು ಮತ್ತು ನಿರುದ್ಯೋಗಿ ಯುವಕರ ಭಾರತ. ಎರಡನೆಯದ್ದು ಇಡೀ ದೇಶದ ಸಂಪತ್ತನ್ನು ಬರೀ 200- 300 ಜನರು ಹೊಂದಿರುವ ಭಾರತ. ಶೇ 90ರಷ್ಟು ಲಾಭ ಈ ಜನರ ಕೈಯಲ್ಲಿದೆ. ಸಾಮಾನ್ಯ ಜನರಿಗೆ ಏನೂ ಇಲ್ಲ' ಎಂದು ಆರೋಪಿಸಿದರು.
'21ನೇ ಶತಮಾನದಲ್ಲಿ ಹರಿಯಾಣವು ನಿರುದ್ಯೋಗದಲ್ಲಿ ಚಾಂಪಿಯನ್ ಆಗಿದೆ. ಈ ವಿಷಯದಲ್ಲಿ ನೀವು ಎಲ್ಲರನ್ನೂ ಹಿಂದಿಕ್ಕಿದ್ದೀರಿ'ಎಂದು ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರದ ವಿರುದ್ಧವೂ ರಾಹುಲ್ ಟೀಕಿಸಿದರು.
'ನೋಟು ಅಮಾನ್ಯೀಕರಣ ಮತ್ತು ಸರಕು ಹಾಗೂ ಸರಕು ಸೇವಾ ತೆರಿಗೆ (ಜಿಎಸ್‌ಟಿ) ನೀತಿಗಳಲ್ಲ. ಅವು ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ನಾಶಮಾಡುವ ಅಸ್ತ್ರಗಳಾಗಿವೆ. ಮೊದಲು ಅಗ್ನಿಪಥ ಯೋಜನೆ ಏನೆಂದು ನನಗೆ ಅರ್ಥ ಮಾಡಿಸಿ. ಬಿಜೆಪಿಯವರು ತಾವು ದೇಶಪ್ರೇಮಿಗಳು ಎಂದು ಹೇಳಿಕೊಳ್ಳುತ್ತಾರೆ. ಅವರ ದೇಶಪ್ರೇಮ ಎಂಥದ್ದು ಎಂಬುದನ್ನು ನನಗೆ ಅರ್ಥಮಾಡಿಸಿ' ಎಂದರು.
ಮಾತು ತಪ್ಪಿದ ಬಿಜೆಪಿ: ಖರ್ಗೆ ಟೀಕೆ
ಪಾಣಿಪತ್:
ಹಣದುಬ್ಬರ ಮತ್ತು ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ
ಟೀಕಿಸಿರುವ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು, 'ಬಿಜೆಪಿಯು ಚುನಾವಣಾ
ಸಮಯದಲ್ಲಿ ದೊಡ್ಡ ಭರವಸೆಗಳನ್ನು ನೀಡಿ, ಅಧಿಕಾರಕ್ಕೆ ಬಂದ ನಂತರ ಆ ಮಾತಿಗೆ ತಪ್ಪಿದೆ'
ಎಂದು ಆರೋಪಿಸಿದ್ದಾರೆ.
ಭಾರತ್ ಜೋಡೊ ಯಾತ್ರೆಯ ಅಂಗವಾಗಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಅವರು, '45 ವರ್ಷಗಳಲ್ಲಿ ನಿರುದ್ಯೋಗದ ಪ್ರಮಾಣವು ಎಂದಿಗೂ ಹೆಚ್ಚಾಗಿರಲಿಲ್ಲ. ವಿದ್ಯಾವಂತ ಯುವಜನರು, ಎಂಜಿನಿಯರಿಂಗ್, ವೈದ್ಯಕೀಯ ಪದವೀಧರರು ಕೂಡಾ ನಿರುದ್ಯೋಗಿಗಳಾಗಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಬಗ್ಗೆ ಚಿಂತೆಯೇ ಇಲ್ಲ. ಅವರಿಗೆ ಆರ್ಥಿಕ ಸ್ಥಿತಿ, ಹಣದುಬ್ಬರ, ನಿರುದ್ಯೋಗ ಮುಖ್ಯವಲ್ಲ. ಅವರಿಗೆ ಚುನಾವಣೆಯಷ್ಟೇ ಮುಖ್ಯ' ಎಂದು ಟೀಕಿಸಿದರು.
ರ‍್ಯಾಲಿಯಲ್ಲಿ ಪಕ್ಷದ ಹಿರಿಯ ನಾಯಕಿ ಕುಮಾರಿ ಸೆಲ್ಜಾ, ನಾಯಕರಾದ ಭೂಪಿಂದರ್ ಸಿಂಗ್ ಹೂಡಾ, ಕೆ.ಸಿ. ವೇಣುಗೋಪಾಲ್, ಶಕ್ತಿಸಿಂಹ ಗೋಹಿಲ್, ಕಿರಣ್ ಚೌಧರಿ ಮತ್ತು ಡಿ.ಕೆ. ಶಿವಕುಮಾರ್ ಉಪಸ್ಥಿತರಿದ್ದರು.