ಇಡುಕ್ಕಿ: ರಸ್ತೆಯಲ್ಲಿ ಸಿಕ್ಕ ಮದ್ಯ ಸೇವಿಸಿ, ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಯುವಕರಲ್ಲಿ ಓರ್ವ ಯುವಕ ಸಾವಿಗೀಡಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.
ಮೃತ ಯುವಕನನ್ನು ಆದಿಮಲಿ ನಿವಾಸಿ ಕುಂಜುಮೊನ್ ಎಂದು ಗುರುತಿಸಲಾಗಿದೆ.
ಮದ್ಯದಲ್ಲಿ ಕೀಟನಾಶಕಗಳ ಕುರುಹು ಪತ್ತೆಯಾಗಿದೆ. ಆದರೆ, ಸಾವಿಗೆ ಅದೇ ಕಾರಣವೇ ಎಂಬುದು ಸ್ಪಷ್ಟವಾಗಿಲ್ಲ.
ಯುವಕರಿಗೆ ಅಪ್ಸರಕುನ್ನು ರಸ್ತೆಯಲ್ಲಿ ಮದ್ಯದ ಬಾಟಲಿ ಸಿಕ್ಕಿತು. ಕುಂಜುಮೋನ್ ಜೊತೆಗೆ ಅನಿಲ್ ಕುಮಾರ್ ಮತ್ತು ಮನೋಜ್ ಕೂಡ ಮದ್ಯ ಸೇವಿಸಿದ್ದರು. ಮೂವರೂ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಆದಿಮಲಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೂವರಲ್ಲಿ ಕುಂಜುಮೋನ್ ಸ್ಥಿತಿ ಗಂಭೀರವಾಗಿತ್ತು. ಇದೀಗ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾನೆ.
ಬೆಳಗ್ಗೆ 7.30ಕ್ಕೆ ರಸ್ತೆಯಲ್ಲಿ ಸಿಕ್ಕ ಮದ್ಯ ಸೇವಿಸಿದೆವು ಎಂದು ಯುವಕರು ಆದಿಮಲಿ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಯುವಕರಿಗೆ ಅಪಾಯ ತಂದಿಡಲು ಯಾರೋ ಉದ್ದೇಶಪೂರ್ವಕವಾಗಿಯೇ ಕ್ರಿಮಿನಾಶಕ ಬೆರೆಸಿದ ಮದ್ಯದ ಬಾಟಲಿ ಇಟ್ಟಿದ್ದಾರೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.