ಕಾಸರಗೋಡು: ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ ಮತ್ತು ಅಲ್ ಖೈದಾ ಸಂಘಟನೆಗಳು ಸ್ಲೀಪರ್‍ಸೆಲ್ ಆಗಿ ಕೇರಳದಲ್ಲಿ ಸಕ್ರಿಯವಾಗಿರುವುದನ್ನು ರಾಷ್ಟ್ರೀಯ ತನಿಖಾ ಏಜನ್ಸಿ(ಎನ್‍ಐಎ) ಪತ್ತೆಹಚ್ಚಿದೆ. ಐಸಿಸ್ ಕೇರಳದಲ್ಲಿ ಮಲಯಾಳಿ ಟೆಲಿಗ್ರಾಂ ಚ್ಯಾನಲ್ ಹೊಂದಿದ್ದು, ಇದರ ಹಿಂದೆ ಕೇರಳದ ಉಗ್ರಗಾಮಿ ಸಂಘಟನೆಯೊಂದರ ಕೈವಾಡವಿರುವ ಬಗ್ಗೆ ಎನ್‍ಐಎ ಸಂಶಯ ವ್ಯಕ್ತಪಡಿಸಿದೆ.
ಐಸಿಸ್ ಟೆಲಿಗ್ರಾಮ್ ಚ್ಯಾನೆಲ್ ಆರಂಭಿಸಿರುವುದ ಮೂಲಕ ಕೇರಳದಲ್ಲಿ ಮತೀಯ ಹಿಂಸಾಚಾರ ನಡೆಸುವುದರ ಜತೆಗೆ ದೇಶಾದ್ಯಂತ ಐಸಿಸ್ ಬೆಂಬಲಿಗರನ್ನು ಒಟ್ಟುಗೂಡಿಸುವ ಉದ್ದೇಶವೂ ಅಡಕವಾಗಿದೆ. ಅಲ್‍ಖೈದಾ ಜತೆ ನಿಕಟ ಸಂಪರ್ಕ ಹೊಂದಿರುವ ತುರ್ಕಿಯ ಫೌಂಡೇಶನ್ ಫಾರ್ ಹ್ಯೂಮನ್ ರೈಟ್ಸ್ ಆ್ಯಂಡ್ ಹ್ಯುಮಾನಿಟೇರಿಯನ್ ರಿಲೀಫ್ ಜತೆ ನಂಟು ಹೊಂದಿರುವ ಕೇರಳದ ಸಂಘಟನೆಗಳು ಸ್ಲೀಪರ್ ಸೆಲ್ ಮೂಲಕ ಕಾರ್ಯಾಚರಿಸುತ್ತಿರುವುದಾಗಿಯೂ ಎನ್‍ಐಎ ಸಂಶಯ ವ್ಯಕ್ತಪಡಿಸಿದೆ. ಕಾಸರಗೋಡು ಜಿಲ್ಲೆಯ ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಐಸಿಸ್ ಜತೆ ಸಂಪರ್ಕ ಹೊಂದಿದ ಹಲವು ಮಂದಿ ವರ್ಷಗಳ ಹಿಂದೆ ಅಫ್ಘಾನಿಸ್ತಾನದ ಐಸಿಸ್ ತರಬೇತಿ ಕೇಂದ್ರಕ್ಕೆ ಸೇರ್ಪಡೆಗೊಂಡಿದ್ದರು. ಈ ಬಗ್ಗೆ ಚಂದೇರ ಪೊಲೀಸ್ ಠಾಣೆಯಲ್ಲಿ ವಿವಿಧ ಕೇಸುಗಳೂ ದಾಖಲಾಗಿತ್ತು. ಕೇರಳಾದ್ಯಂತ 22ಕ್ಕೂ ಹೆಚ್ಚು ಮಂದಿ ಐಸಿಸ್ ಶಿಬಿರ ಸೇರ್ಪಡೆಗೊಂಡಿದ್ದು, ಇವರಲ್ಲಿ 16ಮಂದಿ ಕಾಸರಗೋಡು ಜಿಲ್ಲೆಯವರಾಗಿದ್ದಾರೆ. ಶ್ರೀನಗರದ ಭಯೋತ್ಪಾದಕರ ಜತೆ ಸಂಪರ್ಕ ಹೊಂದಿದ್ದ ಕಾಸರಗೋಡು ಜಿಲ್ಲೆಯ ಎಣ್ಮಕಜೆ ಪಂಚಾಯಿತಿಯ ಗುಣಾಜೆ ಎಂಬಲ್ಲಿನ ಮಸೀದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಯನಾಡ್ ವೆಳ್ಳಾಮುಂಡ್ ನಿವಾಸಿಯೊಬ್ಬನನ್ನು ಬೆಂಗಳೂರು ಎನ್‍ಐಎ ಅಧಿಕಾರಿಗಳ ತಂಡ ಬೆಳ್ಳಂಬೆಳಗ್ಗೆ ಬಂಧಿಸಿ ಕರೆದೊಯ್ದ ಘಟನೆ ದಶಕದ ಹಿಂದೆ ನಡೆದಿದ್ದು, ನಂತರದ ದಿನಗಳಲ್ಲಿ ಎನ್‍ಐಎಯ ಇಂತಹ ಕಾರ್ಯಾಚರಣೆಗೆ ಕೇರಳ ಸಾಕ್ಷಿಯಾಗುತ್ತಾ ಬಂದಿದೆ. ಕೆಲವು ಕೇರಳೀಯರ ಐಸಿಸ್ ಸಂಪರ್ಕ ಸಾಬೀತಾಗುತ್ತಿದ್ದಂತೆ ಎನ್‍ಐಎ ಇಲ್ಲಿನ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾ ಇರಿಸಲಾರಂಭಿಸಿತ್ತು.
ಕೇರಳ ಐಸಿಸ್, ಅಲ್‍ಖೈದಾ ಭಯೋತ್ಪಾದಕ ಸಂಘಟನೆಗಳ ಸ್ಲೀಪರ್ ಸೆಲ್-ಎನ್‍ಐಎ ನಿಗಾ
0
ಜನವರಿ 11, 2023
Tags