ಮಂಜೇಶ್ವರ: ಮೀಯಪದವು ಬಾಳಿಯೂರು ಜಂಕ್ಷನ್‍ನಲ್ಲಿ ಶಾಲಾ ವಾಹನ ಮತ್ತು ಸ್ಕೂಟರ್ ಡಿಕ್ಕಿಯಾಗಿ ಮೃತಪಟ್ಟ ಬೆಜ್ಜಂಗಳ ನಿವಾಸಿ ಅಭಿಷೇಕ್ ಅವರ ಮೃತದೇಹದ ಅಂತ್ಯ ಸಂಸ್ಕಾರ ಶುಕ್ರವಾರ ಹಾಗೂ ಮೀಯಪದವು ದರ್ಭೆ ನಿವಾಸಿ ಪ್ರೀತೇಶ್ ಶೆಟ್ಟಿ ಅವರ ಮೃತದೇಹದ ಅಂತ್ಯಸಂಸ್ಕಾರ ಶನಿವಾರ ನೂರರು ಮಂದಿಯ ಅಂತಿಮದರ್ಶನದ ಬಳಿಕ ನೆರವೇರಿಸಲಾಯಿತು.
ಅಭಿಷೇಕ್ ಅವರ ಮೃತದೇಹವನ್ನು ಮೊರತ್ತಣೆಯ ಹಿಂದೂ ರುದ್ರಭೂಮಿಯಲ್ಲಿ ಸಂಸ್ಕರಿಸಲಾಯಿತು. ಮಂಗಳೂರಿನ ಆಸ್ಪತ್ರೆಯಲ್ಲಿ ಶವಮಹಜರು ನಡೆಸಿ ಮೃತದೇಹ ಶುಕ್ರವಾರ ಸಂಜೆ ವೇಳೆಗೆ ತರಲಾಗಿತ್ತು. ಅಪಘಾತದಲ್ಲಿ ಮೃತಪಟ್ಟ ಪ್ರೀತೇಶ್ ಶೆಟ್ಟಿ ಅವರ ತಂದೆ ಶಬರಿಮಲೆ ಯಾತ್ರೆಯಲ್ಲಿದ್ದ ಹಿನ್ನೆಲೆಯಲ್ಲಿ ಇವರ ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಶನಿವಾರ ಬೆಳಗ್ಗೆ ತಂದು ಮನೆ ವಠಾರದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಗಂಭೀರ ಗಾಯಗೊಂಡಿದ್ದ ಇನ್ನೊಬ್ಬ ವಿದ್ಯಾರ್ಥಿ ಚಿಗುರುಪಾದೆ ಕುಳೂರು ನಿವಾಸಿ ನಮಿತ್ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ.
ಶುಕ್ರವಾರ ಬೆಳಗ್ಗೆ ಅಪಘಾತ ಸಂಭವಿಸಿದ್ದು, ವಿದ್ಯಾರ್ಥಿಗಳು ಕಾಲೇಜಿಗೆ ಸಂಚರಿಸುತ್ತಿದ್ದ ಸ್ಕೂಟರ್ ಮತ್ತು ಮೀಯಪದವು ಕಡೆ ಸಂಚರಿಸುತ್ತಿದ್ದ ಉಪ್ಪಳದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಬಸ್ ಮುಖಾಮುಖಿ ಡಿಕ್ಕಿಯಾಗಿತ್ತು.