ಜೆರುಸಲೇಂ: ಪ್ಯಾಲೆಸ್ತೀನಿಯನ್ ಬಂದೂಕುಧಾರಿಯೊಬ್ಬ ಶುಕ್ರವಾರ ರಾತ್ರಿ ಪೂರ್ವ ಜೆರುಸಲೇಂನ ಮಂದಿರದ ಹೊರಗೆ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ 70 ವರ್ಷದ ಮಹಿಳೆ ಸೇರಿದಂತೆ ಏಳು ಜನ ಸಾವನ್ನಪ್ಪಿದ್ದಾರೆ.
ಈ ದುರ್ಘಟನೆಯಲ್ಲಿ ಮೂವರು ಯಗೊಂಡಿದ್ದಾರೆ ಮತ್ತು ಪೊಲೀಸರು ದಾಳಿಕೋರನನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿವಾಸಿಗಳು ಯಹೂದಿ ಸಬ್ಬತ್ ಆಚರಿಸುತ್ತಿರುವಾಗ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಪಶ್ಚಿಮ ದಂಡೆಯಲ್ಲಿ ನಡೆದ ಇಸ್ರೇಲಿ ಮಿಲಿಟರಿ ದಾಳಿಯಲ್ಲಿ ಒಂಬತ್ತು ಪ್ಯಾಲೇಸ್ತಿನಿಯರನ್ನು ಕೊಂದ ಒಂದು ದಿನದ ನಂತರ ಈ ದಾಳಿ ನಡೆದಿದೆ.
ಶೂಟೌಟ್ ನಡೆಯುತ್ತಿದ್ದಂತೆಯೇ ಸ್ಥಳೀಯ ಪೊಲೀಸ್ ಪಡೆಗಳು ತ್ವರಿತವಾಗಿ ಘಟನಾ ಸ್ಥಳಕ್ಕೆ ಆಗಮಿಸಿ ಉಗ್ರನನ್ನು ಕೊಂದು ಹೆಚ್ಚಿನ ಅನಾಹುತವನ್ನು ತಪ್ಪಿಸಿದರೆನ್ನಲಾಗಿದೆ.
ಜೆರುಸಲೆಂ ಸಿನಗೋಗ್ನಲ್ಲಿ ಶುಕ್ರವಾರ ದಾಳಿ ನಡೆಸಿದ ದುಷ್ಕರ್ಮಿ ಯಾರು, ಯಾವ ಸಂಘಟನೆಗೆ ಸೇರಿದವ ಎಂಬ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ಪ್ಯಾಲೆಸ್ತೀನ್ ಪ್ರತ್ಯೇಕತೆಗೆ ಹೋರಾಡುತ್ತಿರುವ ಹಮಾಸ್ ಸಂಘಟನೆಗೆ ಸೇರಿದ ಉಗ್ರ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.