ನವದೆಹಲಿ: ಕೇಂದ್ರ ಸರ್ಕಾರ ಫೆ.1ರಂದು ಮಂಡಿಸಲಿರುವ ಬಜೆಟ್ನಲ್ಲಿ ಆದಾಯ ತೆರಿಗೆಗೆ ಹೊಸ ರೂಪ ನೀಡಲು ಯೋಜಿಸಿದೆ. ಆದಾಯ ತೆರಿಗೆ ನೀತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ. ತೆರಿಗೆದಾರರನ್ನು ಆಕರ್ಷಿಸಲು ಹೊಸ ಆದಾಯ ತೆರಿಗೆ ವ್ಯವಸ್ಥೆ ಅಡಿಯಲ್ಲಿ ದರಗಳನ್ನು ಸ್ವಲ್ಪ ಕಡಿಮೆ ಮಾಡಬಹುದು ಮತ್ತು ಆದಾಯ ತೆರಿಗೆ ಸ್ಲ್ಯಾಬ್ಗಳನ್ನು ಪರಿಷ್ಕರಿಸಬಹುದೆಂದು ಮೂಲಗಳು ತಿಳಿಸಿವೆ.
2020ನೇ ಸಾಲಿನ ಬಜೆಟ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೊಸ ಆದಾಯ ತೆರಿಗೆ ನೀತಿ ಮಂಡಿಸಿದ್ದರು. ಇದರಲ್ಲಿ 5 ಸ್ಲ್ಯಾಬ್ಗಳಿದ್ದವು. ಅದರಡಿ 2.5 ಲಕ್ಷ ರೂಪಾಯಿನಿಂದ 5 ಲಕ್ಷ ರೂಪಾಯಿಗಳವರೆಗೆ ಆದಾಯ ಗಳಿಸುವವರಿಗೆ ಶೇ. 5 ತೆರಿಗೆ ಅನ್ವಯವಾಗುತ್ತಿದೆ. ಇನ್ನು 5 ಲಕ್ಷದಿಂದ 7.5 ಲಕ್ಷ ರೂ. ಆದಾಯ ಗಳಿಸುವವರೆಗೆ ಶೇ. 10, 7.5 ಲಕ್ಷ ರೂ.ಗಳಿಂದ 10ಲಕ್ಷ ರೂ. ಆದಾಯ ಗಳಿಸುವವರು ಶೇ. 15, 10 ಲಕ್ಷದಿಂದ 12.5 ಲಕ್ಷ ರೂ. ಆದಾಯ ಗಳಿಸುವವರು ಶೇ. 20 , 12.5 ಲಕ್ಷ ದಿಂದ 15 ಲಕ್ಷದವರೆಗೆ ಆದಾಯ ಗಳಿಸುವವರು ಶೇ. 25 ಮತ್ತು 15 ಲಕ್ಷಕ್ಕಿಂತ ಮೇಲ್ಪಟ್ಟ ಆದಾಯ ಗಳಿಸುವ ವರು ಶೇ. 30ರಷ್ಟು ಆದಾಯ ತೆರಿಗೆ ಪಾವತಿಸಬೇಕಿದೆ.
ಹಳೆಯ ಆದಾಯ ತೆರಿಗೆ ವ್ಯವಸ್ಥೆಯಲ್ಲಿ 5%, 20% ಮತ್ತು 30%ನ ಮೂರು ಸ್ಲ್ಯಾಬ್ಗಳಿದ್ದವು. ಎರಡೂ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಮೂಲ ವಿನಾಯಿತಿ ಮಿತಿ 2.5 ಲಕ್ಷ ರೂ. ಇದೆ. ಹಳೆಯ ತೆರಿಗೆ ಪದ್ಧತಿಯಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಶೇ.30 ರಷ್ಟು ತೆರಿಗೆ ಪಾವತಿಸಬೇಕಿತ್ತು. ಆದರೆ ಹೊಸ ಪದ್ಧತಿಯಲ್ಲಿ ಶೇ. 30 ತೆರಿಗೆ ದರವು 15 ಲಕ್ಷ ರೂ.ಗಳಿಗಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಅನ್ವಯವಾಗುತ್ತಿದೆ.
ಎರಡೂ ತೆರಿಗೆ ಪದ್ಧತಿಗಳು ತಮ್ಮದೇ ಆದ ವೈಶಿಷ್ಟ್ಯ ಹೊಂದಿವೆ. ಹೊಸ ತೆರಿಗೆ ಪದ್ಧತಿಯಲ್ಲಿ ಹೆಚ್ಚಿನ ವಿನಾಯಿತಿ ಸಾಧ್ಯವಿಲ್ಲ. ಇದರಲ್ಲಿ ಹೆಚ್ಚಿನ ಸಂಬಳದ ತೆರಿಗೆದಾರರು ಸೆಕ್ಷನ್ 80 ಸಿ, 80 ಡಿ, 80ಸಿಸಿಡಿ ಅಡಿಯಲ್ಲಿ ಇರುವ ಸಾಮಾನ್ಯ ವಿನಾಯಿತಿಗಳನ್ನು ಆಯ್ಕೆ ಮಾಡಲು ಅರ್ಹರಾಗಿರುವುದಿಲ್ಲ. ಏಕೆಂದರೆ ಇವೆಲ್ಲವೂ ಹಳೆಯ ಆದಾಯ ತೆರಿಗೆ ವ್ಯವಸ್ಥೆ ಅಡಿಯಲ್ಲಿ ಲಭ್ಯವಿದೆ.
ತೆರಿಗೆದಾರರು ಯಾವುದೇ ಆದಾಯ ತೆರಿಗೆ ವ್ಯವಸ್ಥೆಯನ್ನುಆಯ್ಕೆ ಮಾಡಿಕೊಳ್ಳಲು ಮುಕ್ತರಾಗಿ ದ್ದಾರೆ. ಸಾಮಾನ್ಯವಾಗಿ ಪಿಪಿಎಫ್, ಎನ್ಎಸ್ಸಿ ಮತ್ತುಆರೋಗ್ಯ ವಿಮೆಯಂತಹ ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಸಂಬಳದಾರರು ಹಳೆಯ ತೆರಿಗೆ ಪದ್ಧತಿಯಲ್ಲಿಯೇ ಉಳಿದಿದ್ದಾರೆ.
ವಂದೇ ಭಾರತ್ ರೈಲ್ವೆ ಯೋಜನೆಗೆ ಉತ್ತೇಜನ
ಈ ಬಾರಿಯ ಬಜೆಟ್ನಲ್ಲಿ ಭಾರತೀಯ ರೈಲ್ವೆಯು ಸುಮಾರು 1.9 ಲಕ್ಷ ಕೋಟಿ ರೂ. ಮೊತ್ತದ
ಅನುದಾನ ಪಡೆಯುವ ಸಾಧ್ಯತೆ ಇದೆ. ವಂದೇ ಭಾರತ್ ರೈಲ್ವೆ ಯೋಜನೆಗೆ ಉತ್ತೇಜನ ನೀಡುವ
ನಿರೀಕ್ಷೆ ಇದೆ. ಇದರ ಜತೆಗೆ 500 ಸೆಮಿ ಹೈ ಸ್ಪೀಡ್ ರೈಲುಗಳು ಮತ್ತು 35 ಹೈಡ್ರೋಜನ್
ಚಾಲಿತ ರೈಲುಗಳನ್ನು ಪರಿಚಯಿಸುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರವು ಎರಡು ಕಾರಣಗಳಿಗಾಗಿ
ವಂದೇ ಭಾರತ್ ರೈಲುಗಳಿಗೆ ಹೆಚ್ಚಿನ ಒತ್ತು ನೀಡಿದೆ. ಎಲ್ಲ ರಾಜಧಾನಿ ಮತ್ತು
ಶತಾಭ್ದಿಗಳನ್ನು ಬದಲಾಯಿಸಿ ಆ ಜಾಗದಲ್ಲಿ ಗಂಟೆಗೆ ಸರಾಸರಿ 180 ಕಿ.ಮೀ ವೇಗದಲ್ಲಿ
ಸಂಚರಿಸುವ ವಂದೇ ಭಾರತ್ ರೈಲುಗಳನ್ನು ಓಡಿಸಲು ಯೋಜಿಸಿದೆ. ಎರಡನೇ ಕಾರಣವೇನೆಂದರೆ ಈ
ರೈಲುಗಳನ್ನು 2025-26ರೊಳಗೆ ಯುರೋಪ್, ದಕ್ಷಿಣ ಅಮೆರಿಕ ಮತ್ತು ಪೂರ್ವ ಏಷ್ಯಾ ದೇಶಗಳ
ಮಾರುಕಟ್ಟೆಗಳಿಗೆ ರಫ್ತು ಮಾಡುವ ವಿಶ್ವಾಸ ಹೊಂದಿದೆ. ಹೊಸದಾಗಿ ವಿನ್ಯಾಸ ಮಾಡಲಾದ 4
ಸಾವಿರ ಆಟೊಮೊಬೈಲ್ ಕ್ಯಾರಿಯರ್ ಕೋಚ್ಗಳು ಮತ್ತು 58 ಸಾವಿರ ವ್ಯಾಗನ್ಗಳನ್ನು ಮುಂಬರುವ
ಬಜೆಟ್ನಲ್ಲಿ ಕೇಂದ್ರ ಸರ್ಕಾರ ಘೋಷಿಸಲಿದೆ.
ಮೂಲ ವಿನಾಯಿತಿ ಮಿತಿ 5 ಲಕ್ಷಕ್ಕೆ ಹೆಚ್ಚಳ?
ಆದಾಯ ತೆರಿಗೆಯ ಮೂಲ ವಿನಾಯಿತಿ ಮಿತಿಯನ್ನು ಈಗಿರುವ 2.5 ಲಕ್ಷದಿಂದ 5 ಲಕ್ಷರೂ.ಗೆ
ಹೆಚ್ಚಿಸುವ ಸಾಧ್ಯತೆ ಇದೆ. ಏಕೆಂದರೆ ಹೊಸ ಆದಾಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವ 5
ಲಕ್ಷ ರೂ ಅಥವಾ ಅದಕ್ಕಿಂತ ಹೆಚ್ಚಿನ ಸಂಬಳದ ತೆರಿಗೆದಾರರು ತೆರಿಗೆ
ಪಾವತಿಸಬೇಕಾಗುತ್ತದೆ. ಏಕೆಂದರೆ ಅವರು 87 ಎ ಅಡಿಯಲ್ಲಿ ಯಾವುದೇ ವಿನಾಯಿತಿಗೆ
ಅರ್ಹರಾಗಿರುವುದಿಲ್ಲ.
ಹೈಡ್ರೋಜನ್ ಚಾಲಿತ ರೈಲುಗಳು
ಇತ್ತೀಚೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಡಾರ್ಜಿಲಿಂಗ್, ನೀಲಗಿರಿ, ಕಲ್ಕಾ-ಶಿಮ್ಲಾ
ಮತ್ತು ಕಾಂಗ್ರಾ ಕಣಿವೆಯಲ್ಲಿ 8 ಪಾರಂಪರಿಕ ಮಾರ್ಗಗಳಲ್ಲಿ ಹೈಡ್ರೋಜನ್ ಚಾಲಿತ ರೈಲು
ಗಳನ್ನು ಓಡಿಸುವ ಯೋಜನೆಗಳನ್ನು ಬಹಿರಂಗಪಡಿಸಿ ದ್ದರು. ಹರಿಯಾಣದ ಸೋನಿಪತ್-ಜಿಂದ್
ವಿಭಾಗದಲ್ಲಿ ಪರೀಕ್ಷಾರ್ಥವಾಗಿ ಈ ರೈಲುಗಳ ಮೂಲ ಮಾದರಿಯನ್ನು
ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಬೆಟ್ಟಗಳಲ್ಲಿ ರೈಲ್ವೆ ಪ್ರಯಾಣವನ್ನು ಶೂನ್ಯ ಇಂಗಾಲ
ಹೊರಸೂಸುವ ಆಯ್ಕೆಯಾಗಿ ಪರಿವರ್ತಿಸುವ ನಿರೀಕ್ಷೆ ಇದೆ. ಇದರ ಜತೆಗೆ ಸರ್ಕಾರವು 100 ಹೊಸ
ವಿಸ್ಟಾಡೋಮ್ ಕೋಚ್ಗಳನ್ನು ಮತ್ತು 1000 ಕೋಚ್ಗಳ ನವೀಕರಣವನ್ನು ಸಹ ಯೋಜಿಸಿದೆ.