ನವದೆಹಲಿ: ಈ ವರ್ಷದ ಗಣರಾಜ್ಯೋತ್ಸವದ ಪರೇಡ್ ವೀಕ್ಷಣೆಗೆ ಸಾರ್ವಜನಿಕರ ಉಪಸ್ಥಿತಿಯನ್ನು ಕೋವಿಡ್ ಪೂರ್ವದ ದಿನಗಳಿಗೆ ಹೋಲಿಸಿದರೆ ಶೇ 50ಕ್ಕಿಂತಲೂ ಹೆಚ್ಚು ಕಡಿತಗೊಳಿಸಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ.
ಆದರೆ, ನಿರ್ಗಮನ ಪಥಸಂಚಲನದಲ್ಲಿ ಬೃಹತ್ ಡ್ರೋನ್ ಪ್ರದರ್ಶನ, ಉತ್ತರ ಮತ್ತು ದಕ್ಷಿಣ ಬ್ಲಾಕ್‌ನ ಮುಂಭಾಗಗಳಲ್ಲಿ 3-ಡಿ ವರ್ಣರಂಜಿತ ದೃಶ್ಯ ಪ್ರದರ್ಶನ ವಾರವಿಡೀ ನಡೆಯಲಿದೆ.
ಇದು ಈ ವರ್ಷದ ಪ್ರಮುಖ ಆಕರ್ಷಣೆ ಎನಿಸಿದೆ.
ಮೊದಲ ಬಾರಿಗೆ ಮತ್ತು ಬಹುಶಃ ಇದೇ ಕೊನೆ ಬಾರಿ, ಭಾರತೀಯ ನೌಕಾಪಡೆಯ ಐಎಲ್ -38 ಕಣ್ಗಾವಲು ವಿಮಾನವು ಕರ್ತವ್ಯ ಪಥದ ಮೇಲೆ ಹಾರಾಟ ನಡೆಸಲಿದೆ. ದೇಶಿ ನಿರ್ಮಾಣದ ತೇಜಸ್ ಲಘು ಯುದ್ಧ ವಿಮಾನದ ಗೈರುಹಾಜರಿ ಎದ್ದುಕಾಣಲಿದೆ.
ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಅವರು, ಕೋವಿಡ್ ಪೂರ್ವದಲ್ಲಿ ಸಮಾರಂಭ ವೀಕ್ಷಣೆಗೆ ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸೇರುತ್ತಿದ್ದರು. ಇದನ್ನು ಈ ಬಾರಿ 45,000ಕ್ಕೆ ಕಡಿತಗೊಳಿಸಲಾಗಿದೆ. ಇದರಿಂದ ಹೆಚ್ಚು ಜನಸಾಮಾನ್ಯರಿಗೆ ವೀಕ್ಷಣೆಯ ಅವಕಾಶ ಸಿಗಲಿದೆ. ಹೊಸದಾಗಿ ಅಳವಡಿಸಿದ ಬುಲೆವಾರ್ಡ್ ಮತ್ತು ಸುತ್ತಮುತ್ತಲಿನ ವಿಸ್ತಾರದ ಹುಲ್ಲುಹಾಸಿನಲ್ಲಿ ಅಂತಿಮ ಕ್ಷಣದವರೆಗೂ ಕಾರ್ಯಕ್ರಮ ಆನಂದಿಸಬಹುದು ಎಂದು ಹೇಳಿದರು.
ಸುಮಾರು 32,000 ಟಿಕಟ್‌ಗಳು ಮಾರಾಟಕ್ಕಿವೆ. ಆದರೆ, ಭಾರಿ ಕಡಿಮೆ ಸಂಖ್ಯೆಯಲ್ಲಿ ಅತಿಥಿಗಳು ಮತ್ತು ಅತಿಗಣ್ಯರಿಗೆ ಸಚಿವಾಲಯ ಆಹ್ವಾನ ಕಳುಹಿಸಿದೆ. ಈ ಹಿಂದೆ 50 ಸಾವಿರದಿಂದ 60 ಸಾವಿರ ಅತಿಥಿಗಳು ಮತ್ತು ಅಧಿಕಾರಿಗಳು, 10 ಸಾವಿರದಿಂದ 15 ಸಾವಿರ ಅತಿ ಗಣ್ಯರಿಗೆ ಆಹ್ವಾನ ಕಳುಹಿಸಲಾಗುತ್ತಿತ್ತು. ಕಳೆದ ಎರಡು ವರ್ಷಗಳಲ್ಲಿ ಈ ಸಂಖ್ಯೆಯನ್ನು 24,000-25,000ಕ್ಕೆ ಇಳಿಸಲಾಯಿತು. ಈ ವರ್ಷ ಇದನ್ನು 12 ಸಾವಿರಕ್ಕೆ ಇಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿ ರಾಜೇಶ್ ರಂಜನ್ ಹೇಳಿದ್ದಾರೆ.
74ನೇ ಗಣರಾಜ್ಯೋತ್ಸವ ಪಥ ಸಂಚಲನ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ ಅಲ್ ಸಿಸಿ ಅವರನ್ನು ಆಹ್ವಾನಿಸಲಾಗಿದೆ. ಈಜಿಪ್ಟ್‌ನ 120 ಸದಸ್ಯರ ತುಕಡಿಯ ಭಾಗವಹಿಸುವಿಕೆಗೆ ಪರೇಡ್ ಸಾಕ್ಷಿಯಾಗಲಿದೆ.