ಅಗರ್ತಲ: ಮುಂಬರುವ ತ್ರಿಪುರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮೈತ್ರಿ ಮಾಡಿಕೊಂಡಿರುವುದಾಗಿ ಸಿಪಿಎಮ್ ಮತ್ತು ಕಾಂಗ್ರೆಸ್ ಪಕ್ಷಗಳು ಶುಕ್ರವಾರ ಘೋಷಿಸಿವೆ. ರಾಜ್ಯದಲ್ಲಿ ಚುನಾವಣೆ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ನಡೆಯಲಿದೆ.
ಕಾಂಗ್ರೆಸ್-ಸಿಪಿಎಮ್ ಮೈತ್ರಿಯು ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯಾಗಿದೆ. ಯಾಕೆಂದರೆ ಸಿಪಿಎಮ್ ಪಕ್ಷವು ರಾಜ್ಯವನ್ನು 25 ವರ್ಷಗಳ ಕಾಲ ಆಳಿದೆ ಹಾಗೂ ಈ ಅವಧಿಯಲ್ಲಿ ಕಾಂಗ್ರೆಸ್ ಪ್ರಧಾನ ಪ್ರತಿಪಕ್ಷವಾಗಿತ್ತು. ಆದರೆ, 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂತು. ಅದೇ ವೇಳೆ, ತೃಣಮೂಲ ಕಾಂಗ್ರೆಸ್ ಕೂಡ ರಾಜ್ಯದಲ್ಲಿ ನೆಲೆ ಕಂಡುಕೊಂಡಿದೆ.
''ರಾಜ್ಯ ಕಾಂಗ್ರೆಸ್ ತಂಡವೊಂದು ಸಿಪಿಎಮ್ ರಾಜ್ಯ ಕಾರ್ಯದರ್ಶಿ ಜೊತೆಗೆ ಸಮಾಲೋಚಿಸಿ ತಂತ್ರಗಾರಿಕೆಯೊಂದನ್ನು ರೂಪಿಸಲಿದೆ ಹಾಗೂ ಸ್ಥಾನ ಹಂಚಿಕೆಯನ್ನು ಅಂತಿಮಗೊಳಿಸಲಿದೆ '' ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ತ್ರಿಪುರಾ ಉಸ್ತುವಾರಿ ಅಜಯ್ ಕುಮಾರ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ''ವಿಧಾನಸಭಾ ಚುನಾವಣೆಯಲ್ಲಿ ನಾವು ಜೊತೆಯಾಗಿ ಸ್ಪರ್ಧಿಸಲಿದ್ದೇವೆ'' ಎಂದರು.
ಅಜಯ್ ಕುಮಾರ್ ಮತ್ತು ಕಾಂಗ್ರೆಸ್ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಭಟ್ಟಾಚಾರ್ಜಿ ಅಗರ್ತಲದಲ್ಲಿರುವ ಸಿಪಿಎಮ್‌ನ ರಾಜ್ಯ ಘಟಕದ ಪ್ರಧಾನ ಕಚೇರಿಗೆ ಭೇಟಿ ನೀಡಿ, ಸ್ಥಾನ ಹಂಚಿಕೆ ಬಗ್ಗೆ ಎಡಪಕ್ಷದ ನಾಯಕರೊಂದಿಗೆ ಮಾತುಕತೆಗಳನ್ನು ಆರಂಭಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.