ನೊಯಿಡಾ/ಜಿನೇವಾ: ಉಜ್ಬೇಕಿಸ್ತಾನದಲ್ಲಿ ಮಕ್ಕಳ ಸಾವಿಗೆ ಕಾರಣವಾಗಿದೆ ಎನ್ನಲಾದ ಕೆಮ್ಮಿನ ಸಿರಪ್ ಅನ್ನು ತಯಾರಿಸಿದ ನೊಯಿಡಾ ಮೂಲದ ಔಷಧಿ ತಯಾರಿಕಾ ಕಂಪನಿ ಮ್ಯಾರಿಯೊನ್ ಬಯೋಟೆಕ್‌ನ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಔಷಧಿ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಿರುವ ಕೆಮ್ಮಿನ ಸಿರಪ್‌ನ ಮಾದರಿಯ ಫಲಿತಾಂಶ ಇನ್ನಷ್ಟೆ ಬರಬೇಕಾಗಿದೆ.
ಮ್ಯಾರಿಯೊನ್ ಬಯೋಟೆಕ್ ಕಂಪನಿ ತಯಾರಿಸಿರುವ ಅಂಬ್ರೊನಾಲ್ ಮತ್ತು ಡಾಕ್-1-ಮ್ಯಾಕ್ಸ್ ಸಿರಪ್‌ಗಳನ್ನು ಬಳಸಬೇಡಿ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಬುಧವಾರ ಎಚ್ಚರಿಕೆ ನೀಡಿತ್ತು. ಕೇಂದ್ರ ತನಿಖಾ ತಂಡ ಮತ್ತು ಉತ್ತರಪ್ರದೇಶದ ಅಧಿಕಾರಿಗಳು ಕಂಪನಿಯ ಕಚೇರಿಯಲ್ಲಿ ಗುರುವಾರ ಮತ್ತೆ ತಪಾಸಣೆ ನಡೆಸಿದ್ದಾರೆ.
'ಡಿಸೆಂಬರ್ 29ರಂದು ನಡೆಸಿದ್ದ ತಪಾಸಣೆಯ ವೇಳೆ ಕಂಪನಿಯ ಪ್ರತಿನಿಧಿಗಳು ಡಾಕ್-1-ಮ್ಯಾಕ್ಸ್ ಔಷಧಿ ತಯಾರಿ ಕುರಿತ ದಾಖಲೆಗಳನ್ನು ನೀಡಿರಲಿಲ್ಲ. ಈ ಕಾರಣಕ್ಕೆ ಅದರ ಉತ್ಪಾದನೆಯನ್ನು ತಕ್ಷಣದಿಂದ ನಿಲ್ಲಿಸುವಂತೆ ಆದೇಶಿಸಲಾಗಿದೆ' ಎಂದು ಉತ್ತರಪ್ರದೇಶದ ಗೌತಮ ಬುದ್ಧ ನಗರದ ಡ್ರಗ್ ಇನ್‌ಸ್ಪೆಕ್ಟರ್ ವೈಭವ್ ಬಬ್ಬರ್ ಹೇಳಿದ್ದಾರೆ.
'ಡಿಸೆಂಬರ್ 29ರ ಆದೇಶದಂತೆ ಔಷಧಿಯ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ. ಈ ಕುರಿತ ಲಿಖಿತ ಆದೇಶವನ್ನು ಕಂಪನಿಗೆ ಜನವರಿ 10ರಂದು ಕಳುಹಿಸಲಾಗಿತ್ತು. ಅದನ್ನು ಸಂಸ್ಥೆ ಅಂಗೀಕರಿಸಿದೆ' ಎಂದೂ ತಿಳಿಸಿದ್ದಾರೆ.
ಅಂಬ್ರೊನಾಲ್ ಮತ್ತು ಡಾಕ್-1-ಮ್ಯಾಕ್ಸ್ ಸಿರಪ್‌ಗಳನ್ನು ಕಂಪನಿಯು ಭಾರತದಲ್ಲಿ ಮಾರಾಟ ಮಾಡಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.