ನವದೆಹಲಿ: ಜಮ್ಮು-ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ತಾರಾಚಂದ್, ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಮಾಜಿ ಮುಖ್ಯಸ್ಥ ಪೀರ್‌ಜಾದಾ ಮೊಹಮ್ಮದ್ ಸಯೀದ್ ಸೇರಿದಂತೆ ಡೆಮಾಕ್ರಟಿಕ್ ಆಜಾದ್ ಪಕ್ಷದ (ಡಿಎಪಿ) 17 ನಾಯಕರು ಶುಕ್ರವಾರ ಕಾಂಗ್ರೆಸ್‌ಗೆ ಮರಳಿದ್ದಾರೆ.
ನಾಯಕರನ್ನು ಬರಮಾಡಿಕೊಂಡ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, 'ಇನ್ನೆರಡು ವಾರಗಳಲ್ಲಿ ಜಮ್ಮು-ಕಾಶ್ಮೀರಕ್ಕೆ ಪ್ರವೇಶಿಸಲಿರುವ 'ಭಾರತ್ ಜೋಡೊ' ಯಾತ್ರೆಗೂ ಮುನ್ನ ಹಳೆಯ ನಾಯಕರು ಪಕ್ಷಕ್ಕೆ ಮರಳುತ್ತಿರುವ ಈ ದಿನ ಸಂತಸದ ದಿನವಾಗಿದೆ' ಎಂದಿದ್ದಾರೆ.
'ಭಾರತ್ ಜೋಡೊ' ಯಾತ್ರೆಯು ದೇಶದಲ್ಲಿ ದೊಡ್ಡ ಆಂದೋಲನವಾಗಿ ಮಾರ್ಪಟ್ಟಿದ್ದು, ಆದ್ದರಿಂದಲೇ ಎಲ್ಲ ನಾಯಕರು ಮತ್ತೆ ಕಾಂಗ್ರೆಸ್ ತೆಕ್ಕೆಗೆ ಮರಳಲು ನಿರ್ಧರಿಸಿದ್ದಾರೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗುಲಾಂ ನಬಿ ಆಜಾದ್ ಮತ್ತೆ ಕಾಂಗ್ರೆಸ್‌ಗೆ ಮರಳಲಿದ್ದಾರೆಯೇ ಎನ್ನುವ ಪ್ರಶ್ನೆಗೆ, ಅಂತಹ ಯಾವುದೇ ಮಾತುಕತೆ ನಡೆದಿಲ್ಲ ಎಂದೂ ವೇಣುಗೋಪಾಲ್ ಉತ್ತರಿಸಿದ್ದಾರೆ.
ಪಕ್ಷದ ಹಿರಿಯ ನಾಯಕ ಜೈರಾಂ ರಮೇಶ್ ಮಾತನಾಡಿ, 'ಶುಕ್ರವಾರ ಒಟ್ಟು 19 ನಾಯಕರು ಪಕ್ಷಕ್ಕೆ ಸೇರಬೇಕಿತ್ತು. ಆದರೆ 17 ಮಂದಿ ಇಂದು ಸೇರಲು ಸಾಧ್ಯವಾಯಿತು. ಇದು ಮೊದಲ ಹಂತವಾಗಿದ್ದು, ಇತರರು ಕೂಡ ಶೀಘ್ರದಲ್ಲೇ ಸೇರಲಿದ್ದಾರೆ' ಎಂದರು.