ಲಖನೌ: 'ಧಾರ್ಮಿಕ ಸ್ಥಳಗಳನ್ನು ಪ್ರವಾಸಿ ತಾಣಗಳನ್ನಾಗಿ ಪರಿವರ್ತಿಸಿ ಹಣ ಗಳಿಸುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಉದ್ದೇಶವಾಗಿದೆ' ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಗುರುವಾರ ಆರೋಪಿಸಿದ್ದಾರೆ.
ವಿಶ್ವದ ಅತ್ಯಂತ ಉದ್ದದ ನದಿ ವಿಹಾರದ ದೋಣಿ 'ಎಂವಿ ಗಂಗಾ ವಿಲಾಸ್'ಗೆ ಹಸಿರು ನಿಶಾನೆ ತೋರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, 'ಗಂಗಾ ಕ್ರಿಯಾ ಯೋಜನೆಯ ಮೂಲಕ ಗಂಗಾ ನದಿಯನ್ನು ಸ್ವಚ್ಛಗೊಳಿಸುವ ಬದಲು, ಬಿಜೆಪಿಯು ಇಂತಹ ಕಾರ್ಯಕ್ರಮಗಳಿಗಾಗಿ ಹಣ ವ್ಯರ್ಥ ಮಾಡುತ್ತಿದೆ' ಎಂದು ಹರಿಹಾಯ್ದಿದ್ದಾರೆ.
'ಆಧ್ಯಾತ್ಮಿಕತೆ ಮತ್ತು ಜ್ಞಾನಕ್ಕಾಗಿ ಜನರು ತಮ್ಮ ಬದುಕಿನ ಕೊನೆಯ ಹಂತದಲ್ಲಿ ವಾರಾಣಸಿಗೆ ಭೇಟಿ ನೀಡುತ್ತಾರೆ. ಆದರೆ ಬಿಜೆಪಿಯು ಹಣ ಮಾಡಲು ಅಲ್ಲಿ ಪ್ರವಾಸೋದ್ಯಮದ ಪ್ರಚಾರ ನಡೆಸುತ್ತಿದೆ' ಎಂದೂ ಹೇಳಿದ್ದಾರೆ.
'ಈಗ ನಾವಿಕರ ಉದ್ಯೋಗವನ್ನೂ ಬಿಜೆಪಿ ಕಸಿಯುತ್ತಿದೆಯೇ?. ವಿಶ್ವದ ವಿವಿಧ ದೇಶಗಳ ಜನರು ಆಧ್ಯಾತ್ಮಿಕತೆಗಾಗಿ ಕಾಶಿಗೆ ಬರುತ್ತಾರೆ. ಆಡಂಬರಕ್ಕಾಗಿ ಅಲ್ಲ. ಇದರಿಂದ ನಿಜವಾದ ಸಮಸ್ಯೆಗಳನ್ನು ಮರೆಮಾಚಲು ಬಿಜೆಪಿಗೆ ಸಾಧ್ಯವಿಲ್ಲ' ಎಂದೂ ಅಖಿಲೇಶ್ ಟ್ವೀಟ್ ಮಾಡಿದ್ದಾರೆ.
ಮೋದಿ ಅವರು ಎಂವಿ ಗಂಗಾ ವಿಲಾಸ್‌ಗೆ ಜನವರಿ 13ರಂದು ಹಸಿರು ನಿಶಾನೆ ತೋರಲಿದ್ದಾರೆ ಮತ್ತು ಗಂಗಾ ನದಿ ತೀರದಲ್ಲಿ ನಿರ್ಮಿಸಿರುವ ಟೆಂಟ್ ಸಿಟಿಯನ್ನೂ ಉದ್ಘಾಟಿಸಲಿದ್ದಾರೆ.