ನಾಗಪುರ: ಭಾರತದಲ್ಲಿ ಮುಸ್ಲಿಮರು ಭಯಪಡುವ ಅಗತ್ಯ ಇಲ್ಲ, ಆದರೆ ಅವರು ತಮ್ಮ ಶ್ರೇಷ್ಠತೆಯ ಪ್ರತಿಪಾದನೆಯನ್ನು ಕೈಬಿಡಬೇಕು ಎಂದು ಆರ್‌ಆರ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಆರ್‌ಎಸ್‌ಎಸ್ ಮುಖವಾಣಿಗಳಾದ ಆರ್ಗನೈಸರ್ ಮತ್ತು ಪಾಂಚಜನ್ಯಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಆರ್ಗನೈಸರ್ ಸಂಪಾದಕ ಪ್ರಫುಲ್ಲ ಕೇತ್ಕರ್ ಮತ್ತು ಪಾಂಚಜನ್ಯ ಸಂಪಾದಕ ಹಿತೇಶ್ ಶಂಕರ್ ಈ ಸಂದರ್ಶನ ನಡೆಸಿದ್ದಾರೆ.
ಸಾವಿರಾರು ವರ್ಷಗಳಿಂದ ಹಿಂದೂ ಸಮಾಜ ಸಂಘರ್ಷ ಎದುರಿಸುತ್ತಲೇ ಬಂದಿದೆ. ಸದ್ಯ ಈ ಅಧುನಿಕತೆಯಲ್ಲಿ ಭಾರತ ಸೇರಿದಂತೆ ಇತರ ಕಡೆಗಳಲ್ಲಿ ಹಿಂದೂಗಳಲ್ಲಿ ಆಕ್ರಮಣಶೀಲತೆ ಕಂಡುಬರುತ್ತಿದೆ. ಆರ್‌ಎಸ್‌ಎಸ್ ಬೆಂಬಲದೊಂದಿಗೆ ಹಿಂದೂಗಳು ಜಾಗೃತರಾಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಹಿಂದೂಸ್ತಾನ, ಹಿಂದೂಸ್ತಾನವಾಗಿಯೇ ಉಳಿಯಬೇಕು. ದೇಶದಲ್ಲಿನ ಮುಸ್ಲಿಮರು ಭಯಪಡುವ ಅಗತ್ಯ ಇಲ್ಲ. ಆದರೆ ಅವರು ತಮ್ಮ ಶ್ರೇಷ್ಠತೆಯ ಮಾತುಗಾರಿಕೆಯನ್ನು ಬಿಡಬೇಕು ಎಂದರು. ನಾವು ಈಗಾಗಲೇ ಒಮ್ಮೆ ಆಳ್ವಿಕೆ ಮಾಡಿದ್ದೇವೆ. ಮುಂದೆಯೂ ಆಳ್ವಿಕೆ ಮಾಡುತ್ತೇವೆ. ನಮ್ಮ ಮಾರ್ಗ ಸರಿ, ಇತರರದ್ದು ತಪ್ಪು ಎಂಬ ಭಾವನೆಯನ್ನು ಮುಸ್ಲಿಮರು ತ್ಯಜಿಸಬೇಕು ಎಂದು ಹೇಳಿದರು.
ಎಲ್‌ಜಿಬಿಟಿ ಸಮುದಾಯದ ಬಗ್ಗೆಯೂ ಪ್ರಸ್ತಾಪ ಮಾಡಿದ ಅವರು, ಎಲ್‌ಜಿಬಿಟಿ ಸಮುದಾಯದವರು ಸಮಾಜದ ಭಾಗವಾಗಿದ್ದಾರೆ, ಅವರಿಗೂ ಬದುಕುವ ಹಕ್ಕಿದೆ, ಅವರ ಜೀವನವನ್ನು ನಾವು ಗೌರವಿಸಬೇಕು ಎಂದರು.
ಸಮಾಜದಲ್ಲಿ ಸಹಬಾಳ್ವೆ ಜೀವನ ನಡೆಸುವ ದೃಷ್ಠಿಕೋನವನ್ನು ನಾವು ಬೆಳೆಸಿಕೊಳ್ಳಬೇಕು. ಇದಕ್ಕೆ ಜ್ಞಾನ ಮಾತ್ರ ಬೇಕು ಎಂದು ಮೋಹನ್ ಭಾಗವತ್ ಅಭಿಪ್ರಾಯಪಟ್ಟರು.