HEALTH TIPS

'ಆರೋಪಿ ತಪ್ಪಿತಸ್ಥನೆಂದು ಸಾಬೀತಾಗದೇ ಅನಿರ್ದಿಷ್ಟಾವಧಿಗೆ ಜೈಲಿನಲ್ಲಿ ಇರುವಂತಿಲ್ಲ'

 

          ನವದೆಹಲಿ : 'ಆರೋಪಿಯು ತಪ್ಪಿತಸ್ಥನೆಂದು ಸಾಬೀತಾಗದ ಹೊರತು ಆತನನ್ನು ಅನಿರ್ದಿಷ್ಟಾವಧಿವರೆಗೂ ಜೈಲಿನಲ್ಲಿ ಇಡಬಾರದು' ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

            ಲಖೀಂಪುರ ಖೀರಿ ಹಿಂಸಾಚಾರದ ಆರೋಪಿ ಆಶಿಶ್‌ ಮಿಶ್ರಾ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಮತ್ತು ಜೆ.ಕೆ.ಮಾಹೇಶ್ವರಿ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಈ ಕುರಿತ ತೀರ್ಪನ್ನು ಕಾಯ್ದಿರಿಸಿತು.

               'ಈ ಪ್ರಕರಣದಲ್ಲಿ ನಿಜವಾಗಿಯೂ ಬಲಿಪಶುಗಳಾಗಿರುವವರು ರೈತರು. ಅವರು ಜೈಲಿನಲ್ಲಿ ನರಳುತ್ತಿದ್ದಾರೆ. ಒಂದೊಮ್ಮೆ ಆಶಿಶ್‌ ಮಿಶ್ರಾಗೆ ಏನನ್ನೂ ಮಂಜೂರು (ಜಾಮೀನು) ಮಾಡದೆ ಹೋದರೆ ರೈತರು ಜೈಲಿನಲ್ಲೇ ಕೊಳೆಯಬೇಕಾಗುತ್ತದೆ. ವಿಚಾರಣಾಧೀನ ನ್ಯಾಯಾಲಯವು ಈಗಾಗಲೇ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ' ಎಂದು ನ್ಯಾಯಪೀಠ ತಿಳಿಸಿತು.

          'ಪ್ರಕರಣದ ತನಿಖೆಯು ನಿಷ್ಪಕ್ಷಪಾತವಾಗಿ ನಡೆಯುತ್ತಿದೆಯೇ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಅದೇ ರೀತಿ ದೋಷಿ ಎಂಬುದು ಸಾಬೀತಾಗದ ಹೊರತು ತನ್ನನ್ನು ಅನಿರ್ದಿಷ್ಟಾವಧಿವರೆಗೂ ಜೈಲಿನಲ್ಲಿ ಇಡುವಂತಿಲ್ಲ ಎಂದು ಹೇಳುವ ಅಧಿಕಾರ ಆರೋಪಿಗೂ ಇದೆ' ಎಂದೂ ಹೇಳಿತು.

               'ಸಾಕ್ಷಿಗಳ ವಿಚಾರಣೆ ನಡೆಸುವವರೆಗೂ ನಾವು ಈ ಪ್ರಕರಣವನ್ನು ಬಾಕಿ ಉಳಿಸುತ್ತೇವೆ. ಈ ಕುರಿತು ವಿಚಾರಣಾಧೀನ ನ್ಯಾಯಾಲಯದ ಮೇಲೆ ಒತ್ತಡ ಹೇರಲು ಆಗುವುದಿಲ್ಲ. ದಿನ ಬಿಟ್ಟು ದಿನ ವಿಚಾರಣೆ ನಡೆಸುವುದೂ ನ್ಯಾಯಸಮ್ಮತವಲ್ಲ' ಎಂದೂ ತಿಳಿಸಿತು.

          ಜಾಮೀನು ಅರ್ಜಿಗೆ ವಿರೋಧ ವ್ಯಕ್ತ‍‍‍‍ಪಡಿಸಿರುವವರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ದುಷ್ಯಂತ್‌ ದವೆ, 'ನ್ಯಾಯಪೀಠದ ಈ ಹೋಲಿಕೆ ಅಚ್ಚರಿ ಮೂಡಿಸಿದೆ. ಇದರಿಂದ ನಿರಾಸೆಯೂ ಆಗಿದೆ' ಎಂದು ಹೇಳಿದರು.

           ಉತ್ತರಪ್ರದೇಶ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಗರಿಮಾ ಪ್ರಸಾದ್‌, 'ಈ ಅಪರಾಧವು ಹೇಯ ಮತ್ತು ಘೋರವಾದುದು. ಹೀಗಾಗಿ ಆರೋಪಿಗೆ ಜಾಮೀನು ನಿರಾಕರಿಸಬೇಕು. ಒಂದೊಮ್ಮೆ ಜಾಮೀನು ನೀಡಿದ್ದೇ ಆದರೆ ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾ‌ಗುತ್ತದೆ' ಎಂದರು.

         'ಈ ಅಪರಾಧವು ಪಿತೂರಿಯಿಂದ ಕೂಡಿದೆ. ಇದೊಂದು ಪೂರ್ವಯೋಜಿತ ಕೃತ್ಯ. ಆರೋಪಿಯು ಕೇಂದ್ರ ಸಚಿವರ ಮಗ. ಆತನ ಪರವಾಗಿ ಪ್ರಭಾವಿ ವಕೀಲರು ವಾದ ಮಂಡಿಸುತ್ತಿದ್ದಾರೆ' ಎಂದು ದುಷ್ಯಂತ್‌ ದವೆ ಹೇಳಿದರು.

            ಆರೋಪಿ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಮುಕುಲ್‌ ರೋಹ್ಟಗಿ, 'ನನ್ನ ಕಕ್ಷಿದಾರರು ಒಂದು ವರ್ಷಕ್ಕಿಂತಲೂ ಅಧಿಕ ಸಮಯದಿಂದ ಜೈಲಿನಲ್ಲಿದ್ದಾರೆ. ವಿಚಾರಣೆ ನಡೆಯುತ್ತಿರುವುದನ್ನು ನೋಡಿದರೆ ಇದು ಮುಗಿಯಲು 7 ರಿಂದ 8 ವರ್ಷ ಆಗಬಹುದು. ಹೀಗಾಗಿ ಜಾಮೀನು ಅರ್ಜಿ ಮಾನ್ಯ ಮಾಡಬೇಕು' ಎಂದು ಮನವಿ ಮಾಡಿದರು.

                  'ಪ್ರಕರಣದ ದೂರುದಾರ ಜಗಜೀತ್‌ ಸಿಂಗ್‌ ಪ್ರತ್ಯಕ್ಷದರ್ಶಿಯಲ್ಲ. ಯಾರೋ ಹೇಳಿದ್ದನ್ನು ಕೇಳಿಸಿಕೊಂಡು ದೂರು ನೀಡಿದ್ದಾರೆ. ನನ್ನ ಕಕ್ಷಿದಾರರು ಅಪರಾಧಿಯಲ್ಲ. ಅಪರಾಧದ ಹಿನ್ನೆಲೆಯನ್ನೂ ಹೊಂದಿಲ್ಲ' ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries