ಉಳ್ಳಾಲ: ಎನ್ಐಎ ತಂಡವೊಂದು ಮಂಗಳೂರಿನ ಉಳ್ಳಾಲದ ಕೈರಂಗಳ ಗ್ರಾಮದ ನಡುಪದವಿನ ಸಮೀಪದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಮೇಲೆ ದಾಳಿ ನಡೆಸಿದ್ದು ವಿದ್ಯಾರ್ಥಿಯೋರ್ವನನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಎನ್ಐಎ ಅಧಿಕಾರಿಗಳು ಮಂಗಳೂರಿನ ಪಿಎ ಇಂಜಿನಿಯರಿಂಗ್ ಕಾಲೇಜಿನ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಉಗ್ರ ಶಾರೀಕ್ ನ ವಿಚಾರಣೆ ನಡೆಸಿದ್ದ ಎನ್ಐಎ ಹಲವು ಮಾಹಿತಿಗಳನ್ನು ಪಡೆದಿದ್ದರು. ಅಲ್ಲದೆ ಬಂಧಿತ ಶಂಕಿತ ಉಗ್ರ ಮಾಝ್ ಮುನೀರ್ ಸಹ ಪಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದನು. ಈ ಎಲ್ಲಾ ಕಾರಣಗಳಿಗಾಗಿ ಎನ್ಐಎ ತಂಡದ 7 ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಾಝ್ ಮುನೀರ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಕೈರಂಗಳ ಗ್ರಾಮದ ನಡುದವಿನ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಆತನನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರುತ್ತಿದ್ದಾರೆ.
ಶಿವಮೊಗ್ಗದ ಪುರಲೆ ಸಮೀಪದ ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಸ್ಫೋಟಕವನ್ನು ಸ್ಫೋಟಿಸಿದ್ದ ಪ್ರಕರಣದಲ್ಲಿ ಮಾಝ್ ಮುನೀರ್ ನನ್ನು ಬಂಧಿಸಲಾಗಿತ್ತು. ಮಾಝ್ ಮುನೀರ್ ಜೊತೆಗೆ ನಿರಂತರ ಸಂಪರ್ಕ ಹಾಗೂ ವಿವಿಧ ಚಟುವಟಿಕೆಗಳಲ್ಲಿ ಜತೆಯಾಗಿ ಭಾಗಿಯಾಗಿದ್ದ ಎಂಬ ಕಾರಣಕ್ಕೆ ವಿದ್ಯಾರ್ಥಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.