ಇಡುಕ್ಕಿ: ಅಕ್ಕಿ ತಿನ್ನುವ ಆಸೆಯಿಂದ ಕಾಡಾನೆಯೊಂದು ಪಡಿತರ ಅಂಗಡಿಯನ್ನೇ ಧ್ವಂಸಗೊಳಿಸಿದ ಪ್ರಸಂಗ ಜಿಲ್ಲೆಯ ಸಂತಾನಪಾರಾ ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಗುಡ್ಡಗಾಡು ಪ್ರದೇಶವಾಗಿರುವ ಇಲ್ಲಿನ ಪನ್ನಿಯಾರ್ ಎಸ್ಟೇಟ್‌ನಲ್ಲಿರುವ ಪಡಿತರ ಅಂಗಡಿಯ ಮೇಲೆ ಕಳೆದ ಹತ್ತು ದಿನಗಳಲ್ಲಿ ಆನೆ ನಾಲ್ಕನೇ ಬಾರಿ ದಾಳಿ ನಡೆಸಿದೆ.
ಶುಕ್ರವಾದ ದಾಳಿಗೆ ಇಡೀ ಅಂಗಡಿ ಧ್ವಂಸವಾಗಿ ಹೋಗಿದೆ. ಈ ಆನೆ ಅಕ್ಕಿಯನ್ನಷ್ಟೇ ಅಲ್ಲ, ಸಕ್ಕರೆ, ಗೋಧಿಯ ಚೀಲವನ್ನೂ ಬೀಳಿಸಿ, ತಿನ್ನುವ ಚಾಳಿ ಇಟ್ಟುಕೊಂಡಿದೆ. ಆನೆಯ ಅಕ್ಕಿ ಪ್ರೀತಿಗಾಗಿ ಊರವರು 'ಅರಿಕೊಂಬನ್' (ಅರಿ-ಅಕ್ಕಿ, ಕೊಂಬನ್-ಆನೆ) ಎಂಬ ಹೆಸರಿಟ್ಟಿದ್ದಾರೆ.
ಲೋಹದ ಬೀಗ ಒಡೆದು ಅಂಗಡಿಯ ಬಾಗಿಲು ಮುರಿದು ಒಳನುಗ್ಗುವುದು ಆನೆಗೆ ಸಲೀಸಾಗಿದೆ ಎಂದು ಅಂಗಡಿಯ ಮಾಲೀಕ ಆಂಟನಿ ಹೇಳಿದ್ದಾರೆ.
ಪದೇ ಪದೇ ಆನೆ ದಾಳಿ ನಡೆಸುತ್ತಿರುವ ಕಾರಣ ಅಂಗಡಿಯಿಂದ ಪಡಿತರವನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಆದರೆ ಶುಕ್ರವಾರ ಮತ್ತೆ ಅಂಗಡಿಗೆ ನುಗ್ಗಿದ ಆನೆ ಅದನ್ನು ಧ್ವಂಸಗೊಳಿಸಿದೆ. ಪಕ್ಕದ ಚೊಕ್ಕನಾಡ್ ಎಸ್ಟೇಸ್ಟ್‌ನಲ್ಲಿರುವ ಅಂಗಡಿ ಮೇಲೆಯೂ ಕೆಲ ದಿನಗಳ ಹಿಂದೆ ಆನೆಗಳು ಇದೇ ರೀತಿ ದಾಳಿ ಮಾಡಿದ್ದವು.
ಆನೆಗಳನ್ನು ಸೆರೆ ಹಿಡಿಯುವುದೇ ಇದಕ್ಕಿರುವ ಪರಿಹಾರ ಎಂದು ಊರವರು ಹೇಳುತ್ತಿದ್ದಾರೆ.
ಪಡಿತರ ಅಂಗಡಿ ಆನೆಗಳು ಸಾಗುವ ದಾರಿಯಲ್ಲಿವೆ. ಇದೊಂದು ಆನೆ ಸಂಚಾರದ ಸಾಂಪ್ರದಾಯಿಕ ದಾರಿಯಾಗಿದ್ದು, ಅವುಗಳ ಹಾದಿ ಬದಲಿಸಲು ಸಾಧ್ಯವಿಲ್ಲ. ಪ್ರತಿ ಬಾರಿಯೂ ಒಂದೇ ಆನೆ ಅಕ್ಕಿ ತಿನ್ನುತ್ತಿದೆಯೇ ಎಂಬುದನ್ನು ಪತ್ತೆ ಮಾಡಿದರೆ ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.