ಜೈಪುರ: 'ಒಪ್ಪಂದವನ್ನು ಮುರಿದು, ಚೀನಾ ತಂಟೆಕೋರ ಧೋರಣೆಯನ್ನು ಮುಂದುವರಿಸಿದರೆ ಅದಕ್ಕೆ ತಕ್ಕುದಾದ ಉತ್ತರ ಕೊಡಬಲ್ಲ ಕ್ಷಮತೆ ಭಾರತದ ರಕ್ಷಣಾ ಪಡೆಗಳಿಗೆ ಇದೆ' ಎಂದು ನಿವೃತ್ತ ಸೇನಾ ಮುಖ್ಯಸ್ಥ ಜೆ.ಜೆ.ಸಿಂಗ್ ಹೇಳಿದರು.
'ಚೀನಾದ ಯೋಧರು ಆಮ್ಲಜನಕದ ಸಿಲಿಂಡರ್ ಇಲ್ಲದೆ ಹೊರಬರುವುದಿಲ್ಲ. ನಮ್ಮ ಯೋಧರು ಮುನ್ನುಗ್ಗುತ್ತಾರೆ. ನಮ್ಮ ಸೇನಾ ವಿಮಾನಗಳಲ್ಲಿ 25 ಯೋಧರು ಸಾಗಬಹುದು. ಅವರ ಕಾಪ್ಟರ್‌ನಲ್ಲಿ ಐದಾರು ಜನರಷ್ಟೆ ಹೋಗಲು ಸಾಧ್ಯ. ಚೀನಾದ ಮುಖ್ಯ ಭೂಪ್ರದೇಶವು ಗಡಿಯಿಂದ 1,000-2,000 ಕಿ.ಮೀ. ದೂರದಲ್ಲಿದೆ. ನಮ್ಮ ಮುಖ್ಯ ಭೂಪ್ರದೇಶ 400 ಕಿ.ಮೀ. ದೂರದಲ್ಲಿದೆ. ನಮ್ಮ ದೇಶವನ್ನು ನಾವು ಉಳಿಸಿಕೊಳ್ಳಬಲ್ಲೆವು' ಎಂದು ಎಚ್ಚರಿಕೆಯ ಧಾಟಿಯಲ್ಲಿ ನುಡಿದರು.
ಜೈಪುರ ಸಾಹಿತ್ಯೋತ್ಸವದ 'ದಿ ಎಲಿಫೆಂಟ್ ಅಂಡ್ ದಿ ಡ್ರ್ಯಾಗನ್: ಎ ಕನೆಕ್ಟೆಡ್ ಹಿಸ್ಟರಿ' ಗೋಷ್ಠಿಯಲ್ಲಿ ಅವರು ಶನಿವಾರ ಮಾತನಾಡಿದರು. 1993 ಹಾಗೂ 1996ರಲ್ಲಿ ಶಾಂತಿಯಿಂದ ಇರುವ ಕುರಿತು ಚೀನಾ ಜತೆ ಒಪ್ಪಂದಗಳಾಗಿದ್ದವು. ಆದರೆ, ಆ ದೇಶ ಅದನ್ನು ಮುರಿಯುತ್ತಿದೆ. ಟಿಬೆಟ್ ಯುದ್ಧಭೂಮಿಯಲ್ಲಿ ಸೆಣೆಸುವಷ್ಟು ಪರಿಣತಿ ಚೀನಾ ಯೋಧರಿಗೆ ಇಲ್ಲ. ನಮ್ಮ ಯೋಧರಿಗೆ ಆ ತರಬೇತಿ ಆಗಿದೆ' ಎಂದು ಅರುಣಾಚಲ ಪ್ರದೇಶದ ಮಾಜಿ ರಾಜ್ಯಪಾಲರೂ ಆದ ಜೆ.ಜೆ. ಸಿಂಗ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಇತಿಹಾಸಕಾರ ತಾನ್‌ಸೆನ್ ಸೆನ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಶ್ಯಾಮ್ ಸರಣ್ ಗೋಷ್ಠಿಯಲ್ಲಿ ಭಾರತ-ಚೀನಾ ಸಂಬಂಧ ಕುರಿತ ಇತಿಹಾಸವನ್ನು ಹೇಳಿದರು. ಸಾಹಿತಿ ವಿಲಿಯಂ ಡಾಲ್‌ರಿಂಪಲ್ ಗೋಷ್ಠಿಯನ್ನು ನಿರ್ವಹಿಸಿದರು.