ಬದಿಯಡ್ಕ: ಬಡಗುಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಬ್ರಹ್ಮಕಲಶ ಮಹೋತ್ಸವವು ಮಂಗಳವಾರ ಮಧ್ಯಾಹ್ನ ಸಂಪನ್ನಗೊಂಡಿತು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಮಹಾದೇವ ಪಾರ್ವತಿ, ಶ್ರೀಶಾಸ್ತಾರ ಹಾಗೂ ಪರಿವಾರ ದೇವತೆಗಳಿಗೆ ಅಭಿಷೇಕ ನೆರವೇರಿತು. ಪ್ರಾತಃಕಾಲ ಏತಡ್ಕ ನೇರಪ್ಪಾಡಿ ತ್ರಿವೇಣಿ ಸಂಗಮದಿಂದ ವಾದ್ಯಘೋಷಗಳೊಂದಿಗೆ ಮೆರವಣಿಗೆಯಲ್ಲಿ ತೀರ್ಥವನ್ನು ತರಲಾಯಿತು. ಮಹಾಗಣಪತಿ ಹೋಮ, ಕವಾಟೋದ್ಘಾಟನೆ, ಶಾಂತಿ, ಪ್ರಾಯಶ್ಚಿತ್ತ, ತತ್ತ್ವ ಹೋಮ, ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಆವಸ್ರವ ಪ್ರೋಕ್ಷಣೆ, ಮಹಾಪೂಜೆಯ ನಂತರ ಭಕ್ತಾದಿಗಳಿಗೆ ಮಂತ್ರಾಕ್ಷತೆ ನೀಡಲಾಯಿತು.
ಕಲಶಾಭಿಷೇಕದ ಸಂದರ್ಭ ಗಣ್ಯರ ಉಪಸ್ಥಿತಿ :
ಬ್ರಹ್ಮಕಲಶಾಭಿಷೇಕದ ಸಂದಭರ್Àದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಚಿತ್ತೈಸಿದ್ದರು. ಅವರಿಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ತಂತ್ರಿವರ್ಯರಾದ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಶ್ರೀ ಕ್ಷೇತ್ರದ ದೈವಜ್ಞ ಹಾಗೂ ಗೌರವಾಧ್ಯಕ್ಷ ಕೆ.ಸಿ. ನಾಗೇಂದ್ರ ಭಾರದ್ವಾಜ್ ಸುರತ್ಕಲ್ ಹಾಗೂ ವಿವಿಧ ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು. ಊರಪರವೂರ ಅನೇಕ ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು. ಮಧ್ಯಾಹ್ನ ಸಹಸ್ರಾರು ಮಂದಿ ಭೋಜನ ಪ್ರಸಾದ ಸ್ವೀಕರಿಸಿದರು.