ತುಳಸಿಯಲ್ಲಿ ಎಂಥ ಅದ್ಭುತವಾದ ಔಷಧೀಯ ಗುಣಗಳಿವೆ ಎಂಬುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ತುಳಸಿಯನ್ನು ಮನೆಮದ್ದಾಗಿ ಬಳಸದೇ ಇರುವವರು ಅಪರೂಪದಲ್ಲಿ ಅಪರೂಪ. ಸಣ್ಣ-ಪುಟ್ಟ ಶೀತ-ಕೆಮ್ಮುವಿನ ಸಮಸ್ಯೆಗೆ ತುಳಸಿ ರಾಮಬಾಣ. ಇನ್ನು ಆಯುರ್ವೇದದಲ್ಲೂ ಇದನ್ನು ತುಂಬಾ ಬಳಸಲಾಗುವುದು.
ತುಳಸಿ ಎಲೆಯ ಪ್ರಯೋಜನಗಳ ಬಗ್ಗೆ ಗೊತ್ತಿದೆ, ಆದರೆ ಇದರ ಬೀಜ ಕೂಡ ತುಳಸಿ ಎಲೆಯಷ್ಟೇ ಅದ್ಭುವ ಔಷಧೀಯ ಗುಣವನ್ನು ಹೊಂದಿದೆ ಎಂಬುವುದು ಗೊತ್ತೇ?
ನಾವು ಇದರ ಬೀಜದ ಗುಣಗಳ ಬಗ್ಗೆ ತಿಳಿದಿರದ ಕಾರಣ ತುಳಸಿ ಹೂ ಕಿತ್ತು ಬಿಸಾಡುತ್ತೇವೆ, ಇನ್ನು ಮುಂದೆ ಹಾಗೇ ಮಾಡಬೇಡಿ, ಸಂಗ್ರಹಿಸಿಟ್ಟು ಈ ರೀತಿಯ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಬಹುದು. ಇದನ್ನು ಪ್ರತಿದಿನ ಬಳಸಿದರೂ ಅನೇಕ ಪ್ರಯೋಜನಗಳನ್ನು ಪಡೆಯಬಹುದು.
ರೋಗ ನಿರೋಧಕ ಶಕ್ತಿ ಹೆಚ್ಚುವುದು
ತುಳಸಿ ಬೀಜದಲ್ಲಿ ಫ್ಲೇವೋನಾಯ್ಡ್ ಹಾಗೂ ಫೀನಾಲಿಕ್ ಅಂಶಗಳಿದ್ದು ಇವುಗಳಲ್ಲಿಆ್ಯಂಟಿಆಕ್ಸಿಡೆಂಟ್ ಅಧಿಕವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ವಯಸ್ಸಾದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಕೆಮ್ಮು, ಅಸ್ತಮಾದಂಥ ಕಾಯಿಲೆ ಹೆಚ್ಚಾಗುವುದು. ತುಳಸಿ ಬೀಜ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.
ಮಲಬದ್ಧತೆ ಸಮಸ್ಯೆ ಹೋಗಲಾಡಿಸುತ್ತದೆ
ಮಲಬದ್ಧತೆ, ಭೇದಿ ಮತ್ತು ಅತಿಸಾರವನ್ನು ಹೋಗಲಾಡಿಸಲು ತುಳಸಿ ಬೀಜ ಸಹಕಾರಿಯಾಗಿದೆ. ಮಲಬದ್ಧತೆ ಸಮಸ್ಯೆ ಇರುವವರು ಸ್ವಲ್ಪ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಕುಡಿದರೆ ಮಲವಿಸರ್ಜನೆಗೆ ಅನುಕೂಲಕವಾಗುತ್ತದೆ. ತುಳಸಿ ಬೀಜಗಳು ಮೂತ್ರವರ್ಧಕ ಗುಣಗಳನ್ನು ಸಹ ಹೊಂದಿವೆ. ಇದನ್ನು ಬಳಸುವುದರಿಂದ ಅಸಿಡಿ, ಅಜೀರ್ಣ ಈ ಬಗೆಯ ಸಮಸ್ಯೆಗಳು ಕಾಣಿಸುವುದಿಲ್ಲ. ತುಳಸಿ ಬೀಜವನ್ನು ಟೀ ರೀತಿಯಲ್ಲಿ ನಿಯಮಿತವಾಗಿ ಸೇವಿಸಿದರೆ ಈ ಸಮಸ್ಯೆಗಳಿಗೆ ಉತ್ತಮ ಪರಿಣಾಮ ಕಾಣುವಿರಿ. ಇದು ಕರುಳನ್ನು ಕೂಡ ಡಿಟಾಕ್ಸ್ ಅಂದರೆ ಸ್ವಚ್ಛ ಮಾಡುತ್ತೆ. ನೀವು ಇದರಿಂದ ಶರಬತ್ತು ಕೂಡ ಮಾಡಿ ಕುಡಿಯಬಹುದು.
ಮೈ ತೂಕ ಕೂಡ ಕಡಿಮೆ ಮಾಡುತ್ತದೆ
ತುಳಸಿ ಬೀಜ ಬಳಸಿದರೆ ಬೇಗನೆ ಹಸಿವು ಉಂಟಾಗುವುದಿಲ್ಲ, ಇದರಿಂದಾಗಿ ನಾವು ತಿನ್ನುವುದು ಕಡಿಮೆಯಾಗುವುದು, ಈ ರಿತಿಯಲ್ಲಿ ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಅಲ್ಲದೆ ಇದರಲ್ಲಿ ನಾರಿನಂಶ ಚೆನ್ನಾಗಿ ಇರುವುದರಿಂದ ಚಯಪಚಯ ಕ್ರಿಯೆ ಉತ್ತಮವಾಗಿ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ. ಮೈ ತೂಕ ನಿಯಂತ್ರಣದಲ್ಲಿ ಜೀರ್ಣಕ್ರಿಯೆ ಚೆನ್ನಾಗಿ ನಡೆಯುವುದು ಕೂಡ ಅವಶ್ಯಕವಾಗಿದೆ.
ಮಧುಮೇಹ ತಡೆಗಟ್ಟುತ್ತದೆ
ಮಧುಮೇಹಿಗಳು ಕೂಡ ಈ ಬೀಜವನ್ನು ಬಳಸುವುದರಿಂದ ಪ್ರಯೋಜನವನ್ನು ಪಡೆಯಬಹುದು. ಇದರಲ್ಲಿ ನಾರಿನಂಶ ಅದಿಕವಿರುವುದರಿಂದ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ. ಟೈಪ್ 1, ಟೈಪ್ 2 ಮಧುಮೇಹ ಹೊಂದಿರುವವರು ಇದನ್ನು ಬಳಸುವುದು ಒಳ್ಳೆಯದು.
ಕೊಲೆಸ್ಟ್ರಾಲ್ ತಡೆಗಟ್ಟುತ್ತದೆ
ತುಳಸಿ ಬೀಜಗಳನ್ನು ಬಳಸಿದರೆ ದೇಹದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಬಹುದು. ಆಯುರ್ವೇದದಲ್ಲಿ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ತುಳಸಿ ಬೀಜಗಳನ್ನು ಬಳಸಲಾಗುತ್ತದೆ. ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಎರಡೂ ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಆದರೆ ತುಳಸಿ ಬೀಜಗಳು ಹೆಚ್ಚಿನ ಲಿಪಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಆದ್ದರಿಂದ ತುಳಸಿ ಬೀಜ ಬಳಸಿದರೆ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯದ ಆರೋಗ್ಯ ವೃದ್ಧಿಸುವುದು.
ಬಾಯಿಯ ಆರೋಗ್ಯ
ಬಾಯಿಹುಣ್ಣಿನ ಸಮಸ್ಯೆ ಇರುವವರು ಇದನ್ನು ಬಳಸಿ ಮೌತ್‌ವಾಶ್ ಮಾಡಿದರೆ ಬೇಗನೆ ಗುಣವಾಗುವುದು. ಅಲ್ಲದೆ ಕೆಲವರ ಬಾಯಿ ದುರ್ವಾಸನೆ ಬೀರುತ್ತದೆ. ತುಳಸಿ ಬೀಜ ಬಳಸುವುದರಿಂದ ಇಂಥ ಸಮಸ್ಯೆ ದೂರಾಗುವುದು.
ತುಳಸಿ ಬೀಜ ಹೇಗೆ ಬಳಸಬೇಕು?
* ತುಳಸಿ ಬೀಜವನ್ನು ನೀರಿನಲ್ಲಿ ನೆನೆ ಹಾಕಿ ಕುಡಿಯಬಹುದು
* ತುಳಸಿ ಬೀಜವನ್ನು ಸಲಾಡ್‌ನಲ್ಲಿ ಬಳಸಬಹುದು
* ಸ್ವಲ್ಪ ಬೀಜವನ್ನು ಹಾಗೇ ಬಾಯಿಗೆ ಹಾಕಿ ಜಗಿಯಬಹುದು.
* ತೂಕ ನಷ್ಟಕ್ಕೆ ಬಳಸುವುದಾದರೆ ಊಟಕ್ಕೆ ಮೊದಲೇ ಬಳಸಿ.