ಮಂಜೇಶ್ವರ: ಕಾಸರಗೋಡಿನ ಸಾಹಿತ್ಯ ವೈವಿಧ್ಯಗಳು ಸಾಹಿತ್ಯ ಚರಿತ್ರೆಯಲ್ಲಿ ಸಮರ್ಪಕವಾಗಿ ಗುರುತಿಸಿಕೊಂಡಿಲ್ಲ. ಕಾಸರಗೋಡಿನ ವೈವಿಧ್ಯವನ್ನು ಹೆಚ್ಚು ಸೇರಿಸಬೇಕಾಗಿದೆ ಎಂದು ಸಾಹಿತಿ, ಲೇಖಕ ಸಿ.ವಿ.ಬಾಲಕೃಷ್ಣನ್ ಹೇಳಿದರು.
ಮಂಜೇಶ್ವರದ ಗೋವಿಂದ ಪೈ ಸ್ಮಾರಕದಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಆಯೋಜಿಸಿರುವ ‘ಗಿಳಿವಿಂಡು’ ಬಹುಭಾಷಾ ಸಮ್ಮೇಳನದ ಅಂಗವಾಗಿ ಸಾಹಿತ್ಯದಲ್ಲಿ ಕಾಸರಗೋಡಿನ ಬದುಕು ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಸರಗೋಡು ಕೊನೆಯಿಲ್ಲದ ವೈಚಾರಿಕತೆಗಳ ನೆಲೆವೀಡಾಗಿದೆ. ಇಲ್ಲಿನ ಮಾವಿಲರು ಮತ್ತು ಬೇಟೆಗಾರರ ಕಥೆಯನ್ನು ಹೇಳುವ ‘ಗೋತ್ರ ಕಥೆ’ ಎಂಬ ಕೃತಿಯನ್ನು ಬರೆಯಲು ತನಗೆ ಸಾಧ್ಯವಾಯಿತು. ಕಾಸರಗೋಡಿನ ಮಣ್ಣಿನಲ್ಲಿ ಗುರುತು ಸಿಗದ, ಅವ್ಯಕ್ತ ಬದುಕುಗಳು ಎμÉ್ಟೂೀ ಇವೆ. ಹೊಸ ಕಾಲದ ಸಾಹಿತಿಗಳು ಆ ಬದುಕುಗಳನ್ನು ಕಂಡು ಸಾಹಿತ್ಯದಲ್ಲಿ ಮೈಗೂಡಿಸಿಕೊಳ್ಳಲಿ ಎಂಬ ಆಶಯವಿದೆ ಎಂದರು.
ಸಾಹಿತ್ಯದಲ್ಲಿ ಕಾಸರಗೋಡಿನ ಬದುಕು ಎಂಬ ವಿಷಯದ ಕುರಿತು ಶಿಕ್ಷಕ ಹಾಗೂ ಸಂಶೋಧಕ ಡಾ.ಕೆ.ವಿ.ಸಜೀವನ್ ಹಾಗೂ ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪ್ರಬಂಧ ಮಂಡಿಸಿದರು. ಸಾಹಿತಿ ಹಾಗೂ ಗ್ರಂಥಲೋಕದ ಸಂಪಾದಕ ಪಿ.ವಿ.ಕೆ.ಪನೆಯಾಲ್, ಲೇಖಕ, ಪತ್ರಕರ್ತ ವಿಕ್ರಂ ಕಾಂತಿಕೆರೆ ಮತ್ತು ಸುರಬ್ ತಮ್ಮ ಬರವಣಿಗೆಯ ಅನುಭವಗಳನ್ನು ಮಂಡಿಸಿದರು. ಕೇರಳ ಸಾಹಿತ್ಯ ಅಕಾಡೆಮಿ ಸದಸ್ಯ ಇ.ಪಿ.ರಾಜಗೋಪಾಲನ್ ಸ್ವಾಗತಿಸಿ, ಗಂಗಾಧರನ್ ಆದಿಯೋಡಿ ವಂದಿಸಿದರು.
ಸಾಹಿತ್ಯದಲ್ಲಿ ಕಾಸರಗೋಡು ಇನ್ನೂ ಗುರುತಿಸಬೇಕಾಗಿದೆ: ಸಿ.ವಿ.ಬಾಲಕೃಷ್ಣನ್: ಬಹುಭಾಷಾ ಸಮ್ಮೇಳನದಲ್ಲಿ ವಿಚಾರ ಸಂಕಿರಣ ಉದ್ಘಾಟಿಸಿ ಅಭಿಮತ
0
ಜನವರಿ 08, 2023