ಧನಬಾದ್ : ಇಲ್ಲಿನ ನರ್ಸಿಂಗ್ ಹೋಂವೊಂದರಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ವೈದ್ಯ ದಂಪತಿ ಸೇರಿ ಐವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ನರ್ಸಿಂಗ್ ಹೋಂನ ಮಾಲೀಕ ಡಾ. ವಿಕಾಸ್ ಹಜ್ರಾ, ಪತ್ನಿ ಡಾ.
ಪ್ರೇಮಾ ಹಜ್ರಾ, ವಿಕಾಸ್ ಅವರ ಸೋದರಳಿಯ ಸೋಹನ್ ಖಮಾರಿ, ಮನೆಕೆಲಸದಾಕೆ ತಾರಾ ದೇವಿ ಮತ್ತು ಇನ್ನೊಬ್ಬರು ಮೃತಪಟ್ಟಿದ್ದಾರೆ ಎಂದೂ ವಿವರಿಸಿದ್ದಾರೆ.
ನರ್ಸಿಂಗ್ ಹೋಂನ ದಾಸ್ತಾನು ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರಿಂದ ಹೊರಹೊಮ್ಮಿದ ಹೊಗೆಯಿಂದಾಗಿ ಐವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಅಗ್ನಿ ಶಾಮಕದಳದ ಆರು ವಾಹನಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿವೆ ಎಂದು ಹೇಳಿದ್ದಾರೆ.
ಒಬ್ಬರಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.
'ಅಗ್ನಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.