ವಾಷಿಂಗ್ಟನ್: 'ನಾನು ಸಿಖ್ ಧರ್ಮದಲ್ಲಿ ನಂಬಿಕೆ ಹೊಂದಿದ್ದೇನೆ ಎಂಬ ಕಾರಣಕ್ಕೆ ಸ್ವಪಕ್ಷದಲ್ಲಿರುವ ಮತಾಂಧ ನಾಯಕರು ನನ್ನ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ' ಎಂದು ಅಮೆರಿಕದಲ್ಲಿ ಅಟಾರ್ನಿಯಾಗಿರುವ ಭಾರತ ಮೂಲದ ಹರ್ಮೀತ್ ಧಿಲ್ಲೋನ್ ಆರೋಪಿಸಿದ್ದಾರೆ.
ರಿಪಬ್ಲಿಕನ್ ಪಕ್ಷದ ನಾಯಕಿಯಾಗಿರುವ 54 ವರ್ಷದ ಹರ್ಮೀತ್ ಅವರು ರಿಪಬ್ಲಿಕನ್ ನ್ಯಾಷನಲ್ ಕಮಿಟಿಯ (ಆರ್‌ಎನ್‌ಸಿ) ಮುಖ್ಯಸ್ಥೆ ಸ್ಥಾನಕ್ಕೆ ರೊನ್ನಾ ಮೆಕ್‌ಡೇನಿಯಲ್ ವಿರುದ್ಧ ಕಣಕ್ಕಿಳಿದಿದ್ದಾರೆ.
'ಮುಖ್ಯಸ್ಥೆಯಾಗಿ ಆಯ್ಕೆಯಾದರೆ ಆರ್‌ಎನ್‌ಸಿಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಮಾಡುವುದಾಗಿ ಹೇಳಿದ್ದೆ. ಹೀಗಾಗಿ ಕೆಲವರು ನನ್ನ ಧಾರ್ಮಿಕ ನಂಬಿಕೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಇದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಹೆದರಿ ಸ್ಪರ್ಧೆಯಿಂದ ಹಿಂದೆ ಸರಿಯುವುದೂ ಇಲ್ಲ' ಎಂದು ಸೋಮವಾರ ಟ್ವೀಟ್ ಮಾಡಿದ್ದಾರೆ.
ಆರ್‌ಎನ್‌ಸಿ ಮುಖ್ಯಸ್ಥೆ ಸ್ಥಾನಕ್ಕೆ ಇದೇ 27ರಂದು ಚುನಾವಣೆ ನಿಗದಿಯಾಗಿದೆ.