ನವದೆಹಲಿ: ಸಲಿಂಗಿ ವಕೀಲ ಸೌರಭ್ ಕೃಪಾಲ್ರನ್ನು ದೆಹಲಿ ಹೈ ಕೋರ್ಟ್ ನ್ಯಾಯಮೂರ್ತಿಯನ್ನಾಗಿ ನೇಮಿಸಬೇಕೆಂಬ ಶಿಫಾರಸನ್ನು ಸಿಜೆಐ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಗುರುವಾರ ಮತ್ತೆ ಪ್ರತಿಪಾದಿಸಿದೆ. ಕೃಪಾಲ್ ಬಹಿರಂಗವಾಗಿಯೇ ಸಲಿಂಗಿ ಹಾಗೂ ಆತನ ಜೊತೆಗಾರ ಸ್ವಿಸ್ ರಾಷ್ಟ್ರೀಯ ಆಗಿರುವುದರಿಂದ ನೇಮಕ ಅಸಾಧ್ಯ ಎಂದು ಕೇಂದ್ರ ಸರ್ಕಾರ ನೀಡಿರುವ ಕಾರಣವನ್ನು ಸುಪ್ರೀಂ ತಿರಸ್ಕರಿಸಿದೆ.
50 ವರ್ಷದ ಕೃಪಾಲ್ರನ್ನು ಹೈ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸುವಂತೆ 2017 ಅಕ್ಟೋಬರ್ 13ರಂದು ಕೊಲಿಜಿಯಂ ವೊದಲ ಬಾರಿಗೆ ಶಿಫಾರಸು ಮಾಡಿತ್ತು. ನ್ಯಾಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಕೆ.ಎಂ. ಜೋಸೆಫ್ ಕೊಲಿಜಿಯಂನ ಇನ್ನಿಬ್ಬರು ಸದಸ್ಯರಾಗಿದ್ದಾರೆ. ತಮ್ಮ ಲೈಂಗಿಕ ಆಸಕ್ತಿಯ ಬಗ್ಗೆ ಕೃಪಾಲ್ ಮುಕ್ತವಾಗಿ ಹೇಳಿಕೊಂಡಿರುವುದು ಅವರ ದೊಡ್ಡತನವಾಗಿದೆ. ಅದನ್ನವರು ಗುಟ್ಟಾಗಿಟ್ಟುಕೊಂಡಿಲ್ಲ. ಸಲಿಂಗಿ ಯಾಗಿರುವುದು ನ್ಯಾಯಮೂರ್ತಿ ಹುದ್ದೆಯ ಅಭ್ಯರ್ಥಿಯಾಗುವುದಕ್ಕೆ ಅನರ್ಹತೆ ಆಗುವುದಿಲ್ಲ ಎಂದು ಕೊಲಿಜಿಯಂ ಅಭಿಪ್ರಾಯಪಟ್ಟಿದೆ. ಸಂವಿಧಾನ ಮಾನ್ಯವಾದ ಹಕ್ಕನ್ನು ಅಭ್ಯರ್ಥಿ ಪ್ರತಿಪಾದಿಸುತ್ತಿದ್ದಾರೆ. ಹೀಗಾಗಿ ಅವರ ಅಭ್ಯರ್ಥಿತನವನ್ನು ತಿರಸ್ಕರಿಸುವುದು ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಸಾಂವಿಧಾನಿಕ ತತ್ವಗಳಿಗೇ ವಿರುದ್ಧವಾಗುತ್ತದೆ ಎಂದು ಕೊಲಿಜಿಯಂ ಅಭಿಪ್ರಾಯಪಟ್ಟಿದೆ.
ಅರ್ಹತೆಯಿದೆ
'ಕೃಪಾಲ್ ಅವರಿಗೆ ಅರ್ಹತೆಯಿದೆ, ವೈಯಕ್ತಿಕ ವಿಶ್ವಾಸಾರ್ಹತೆಯಿದೆ ಮತ್ತು ಅವರು
ಬುದ್ಧಿವಂತರೂ ಹೌದು. ಅವರ ನೇಮಕದಿಂದ ದೆಹಲಿ ಹೈ ಕೋರ್ಟ್ ಪೀಠದ ಘನತೆ ಹೆಚ್ಚುತ್ತದೆ'
ಎಂದಿರುವ ಕೊಲಿಜಿಂ, ಅವರನ್ನು ನೇಮಿಸಿಕೊಳ್ಳುವುದರಿಂದ ವೈವಿಧ್ಯತೆ ಮತ್ತು
ಒಳಗೊಳ್ಳುವಿಕೆ ಸಾಧ್ಯವಾಗುತ್ತದೆ ಎಂದಿದೆ.