ನವದೆಹಲಿ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ನಡುರಾತ್ರಿಯಲ್ಲಿ ರಾಷ್ಟ್ರರಾಜಧಾನಿ ರಸ್ತೆಯಲ್ಲಿ ಕುಡುಕನೊಬ್ಬನಿಂದ ಶೋಷಣೆಗೆ ಒಳಗಾಗಿರುವ ಘಟನೆ ನಡೆದಿದೆ.
ಸ್ವಾತಿ ಮಲಿವಾಲ್ ಅವರು ಬುಧವಾರ ರಾತ್ರಿ ಮಹಿಳಾ ಸುರಕ್ಷತೆ ಬಗ್ಗೆ ತಮ್ಮ ತಂಡದ ಜೊತೆ ದೆಹಲಿಯ ಏಮ್ಸ್ ರಸ್ತೆಯಲ್ಲಿ ಪರಿಶೀಲನೆ ನಡೆಸಲು ಹೋಗಿದ್ದರು.
'ಈ ವೇಳೆ ಬಲೆನೊ ಕಾರಿನಲ್ಲಿ ಬಂದಿದ್ದ ಮದ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬ ನನ್ನನ್ನು ನೋಡಿ ಕಾರಿನಲ್ಲಿ ಕೂರುವಂತೆ ಕಣ್ ಸನ್ನೆ ಮಾಡಿದ್ದ. ಅದನ್ನು ನಾನು ನಿರಾಕರಿಸಿ, ಗದರಿದಾಗ ಮತ್ತೆ ಕಾರನ್ನು ಯು ಟರ್ನ್ ಮಾಡಿಕೊಂಡು ಬಂದು ಕೆಟ್ಟದಾಗಿ ವರ್ತಿಸಿದ. ಇದನ್ನು ಪ್ರಶ್ನಿಸಿ ಅವನನ್ನು ಕಾರಿನಿಂದ ಕೆಳಗಿಳಿಸುವ ಪ್ರಯತ್ನದಲ್ಲಿದ್ದಾಗ ಕಾರನ್ನು ಚಲಾಯಿಸಿ ನನ್ನನ್ನು 15-ರಿಂದ 20ಮೀಟರ್ ದೂರ ಎಳೆದೊಯ್ದಿದ್ದಾನೆ. ಈ ವೇಳೆ ದೇವರೇ ನನ್ನನ್ನು ಕಾಪಾಡಿದ' ಎಂದು 36 ವರ್ಷದ ಸ್ವಾತಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಮಹಿಳಾ ಆಯೋಗದ ಅಧ್ಯಕ್ಷರ ಕಥೆಯೇ ಹೀಗಾದರೆ ಉಳಿದ ಮಹಿಳೆಯರ ಪಾಡೇನು? ಎಂದು ಸ್ವಾತಿ ಪ್ರಶ್ನಿಸಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ತಕ್ಷಣವೇ ಸ್ವಾತಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಸ್ವಾತಿ ಅವರಿಗೆ ಶೋಷಣೆ ಮಾಡಿದ 47 ವರ್ಷದ ಹರೀಶ್ ಚಂದ್ರಾ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆತನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.