ನವದೆಹಲಿ :ನ್ಯಾಯಾಧೀಶರ ನೇಮಕಾತಿಗಾಗಿ ಇರುವ ಕೊಲೀಜಿಯಂ ವ್ಯವಸ್ಥೆ ವಿರುದ್ಧ ಇತ್ತೀಚೆಗೆ ಕೇಂದ್ರ ಕಾನೂನು ಸಚಿವ ಕಿರೆಣ್ ರಿಜ್ಜು ನೀಡಿರುವ ಹೇಳಿಕೆಗಳನ್ನು "ವಾಗ್ದಾಳಿ" ಎಂದು ಬಣ್ಣಿಸಿರುವ ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್, ಸ್ವತಂತ್ರ ನ್ಯಾಯಾಂಗದ ಕೊನೆಯ ಭದ್ರಕೋಟೆಯೂ ಕುಸಿದರೆ, ದೇಶವು "ಹೊಸ ಕರಾಳ ಯುಗದ ಪ್ರಪಾತ" ವನ್ನು ಪ್ರವೇಶಿಸಲಿದೆ ಎಂದು ಹೇಳಿದ್ದಾರೆ.
ಕೊಲೀಜಿಯಂ ಶಿಫಾರಸು ಮಾಡಿದ ಹೆಸರುಗಳನ್ನು ಅನುಮೋದಿಸದೆ ಬಾಕಿಯಿರಿಸುವುದು "ಪ್ರಜಾಪ್ರಭುತ್ವಕ್ಕೆ ಮಾರಕ" ಎಂದೂ ನಾರಿಮನ್ ಹೇಳಿದರು.
ಆಗಸ್ಟ್ 2021 ರಲ್ಲಿ ನಿವೃತ್ತರಾಗುವ ಮುನ್ನ ಸುಪ್ರೀಂ ಕೋರ್ಟ್ ಕೊಲೀಜಿಯಂ ಭಾಗವಾಗಿದ್ದ ನಾರಿಮನ್ ಅವರು ಏಳನೇ "ಮುಖ್ಯ ನ್ಯಾಯಮೂರ್ತಿ ಎಂ ಸಿ ಚಗ್ಲಾ ಸ್ಮಾರಕ ಭಾಷಣ"ದ ಭಾಗವಾಗಿ "ಎ ಟೇಲ್ ಆಫ್ ಟೂ ಕಾನ್‌ಸ್ಟಿಟ್ಯೂಶನ್ಸ್ - ಇಂಡಿಯಾ ಎಂಡ್ ದಿ ಯುನೈಟೆಡ್ ಸ್ಟೇಟ್ಸ್: ದಿ ಲಾಂಗ್ ಎಂಡ್ ಶಾರ್ಟ್ ಆಫ್ ಇಟ್ ಆಲ್" ಎಂಬ ವಿಷಯದ ಕುರಿತು ಮುಂಬೈಯಲ್ಲಿ ಶುಕ್ರವಾರ ಮಾತನಾಡುತ್ತಿದ್ದರು. ಕಾರ್ಯಕ್ರಮವನ್ನು ಮುಂಬೈ ವಿಶ್ವವಿದ್ಯಾಲಯದ ಕಾನೂನು ವಿಭಾಗ ಆಯೋಜಿಸಿತ್ತು.
"ಈ ಪ್ರಕ್ರಿಯೆಯ ವಿರುದ್ಧ ಕಾನೂನು ಸಚಿವರ ವಾಗ್ದಾಳಿಯನ್ನು ನಾವು ಕೇಳಿದ್ದೇವೆ. ನೀವು ತಿಳಿದಿರಬೇಕಾದ ಎರಡು ಪ್ರಮುಖ ಸಂವಿಧಾನಿಕ ಮೂಲಭೂತ ಅಂಶಗಳಿವೆ ಎಂದು ಕಾನೂನು ಸಚಿವರಿಗೆ ಹೇಳಬಯಸುತ್ತೇನೆ. ಮೊದಲನೆಯದು, ಅಮೆರಿಕಾದಲ್ಲಿರುವುದಕ್ಕೆ ಭಿನ್ನವಾಗಿ, ಕನಿಷ್ಠ ಐದು ಚುನಾಯಿತರಲ್ಲದ ನ್ಯಾಯಾಧೀಶರಿಗೆ ಸಂವಿಧಾನವನ್ನು ಅರ್ಥೈಸುವ ಜವಾಬ್ದಾರಿ ನೀಡಲಾಗುತ್ತದೆ. ಅವರು ಹಾಗೆ ಮಾಡಿದ ನಂತರ ವಿಧಿ 144 ಅನ್ವಯ ಒಂದು ಪ್ರಾಧಿಕಾರವಾಗಿ ಅದಕ್ಕೆ ಬದ್ಧವಾಗುವುದು ನಿಮ್ಮ ಕರ್ತವ್ಯ," ಎಂದು ನಾರಿಮನ್ ಹೇಳಿದರು.
"ಒಬ್ಬ ನಾಗರಿಕನಾಗಿ ನಾನು ಟೀಕಿಸಬಹುದು, ಸಮಸ್ಯೆಯಿಲ್ಲ, ಆದರೆ ಮರೆಯಬೇಡಿ... ನೀವು ಅಧಿಕಾರಸ್ಥರು, ನಿರ್ಧಾರಕ್ಕೆ ನೀವು ಬದ್ಧರಾಗಬೇಕು, ಸರಿಯಾಗಿರಲಿ ಅಥವಾ ತಪ್ಪಾಗಿರಲಿ." ಎಂದು ನಾರಿಮನ್ ಹೇಳಿದರು.
"ಒಬ್ಬ ನ್ಯಾಯಾಧೀಶರ ಹೆಸರನ್ನು ಕೊಲೀಜಿಯಂ ಶಿಫಾರಸು ಮಾಡಿದ ನಂತರ ಒಂದು ನಿರ್ದಿಷ್ಟ ಅವಧಿಯಲ್ಲಿ ನೇಮಕಾತಿ ನಡೆಯುವ ರೀತಿಯ ನಿಬಂಧನೆಗಳನ್ನು ಸಂವಿಧಾನಿಕ ಪೀಠ ಹೊಂದಬೇಕು," ಎಂದು ಅವರು ಹೇಳಿದರು.
"ನಮಗೆ ಸ್ವತಂತ್ರ ಮತ್ತು ನಿರ್ಭೀತ ನ್ಯಾಯಾಧೀಶರುಗಳಿಲ್ಲದೇ ಇದ್ದರೆ, ಇನ್ನೇನೂ ಉಳಿದಿಲ್ಲ. ನನ್ನ ಪ್ರಕಾರ ಈ ಕೊನೆಯ ಭದ್ರಕೋಟೆ ಉರುಳಿದರೆ ನಾವು ಹೊಸ ಕರಾಳ ಯುಗದ ಪ್ರಪಾತದಲ್ಲಿರುವೆವು. ಆರ್ ಕೆ ಲಕ್ಷ್ಮಣ್ ಅವರ ಕಾಮನ್ ಮ್ಯಾನ್ ಕೇಳಿದಂತೆ, ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ, ಅದಕ್ಕೆ ಎಲ್ಲಿಂದ ಉಪ್ಪು ಹಾಕಬಹುದು?. ನಮಗೆ ಅತ್ಯುತ್ತಮ ಸಂವಿಧಾನವಿರಬಹುದು, ಆದರೆ ಅದರ ಅಧೀನದಲ್ಲಿರುವ ಸಂಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ನಾವು ಹೆಚ್ಚೇನೂ ಮಾಡುವ ಹಾಗಿಲ್ಲ," ಎಂದು ಜಸ್ಟಿಸ್ ನಾರಿಮನ್ ಹೇಳಿದರು.