ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆಗೆ (CAA ) ನಿಯಮಗಳನ್ನು ಅಂತಿಮಗೊಳಿಸುವ ಕಾಲಾವಕಾಶವನ್ನು ವಿಸ್ತರಿಸಲು ಕೇಂದ್ರ ಗೃಹ ಸಚಿವಾಲಯ (MHA) ಏಳನೆ ಬಾರಿ ಅನುಮೋದನೆ ಪಡೆದಿದೆ ಎಂದು ಶನಿವಾರ ಅಧಿಕಾರಿಗಳು ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಈ ಕುರಿತು ಗೃಹ ಸಚಿವಾಲಯವು ಸಂಸದೀಯ ಸಮಿತಿಗಳನ್ನು ಸಂಪರ್ಕಿಸಿದ ಮರು ದಿನ ರಾಜ್ಯಸಭೆಯಲ್ಲಿ ಆರು ತಿಂಗಳ ಕಾಲಾವಕಾಶ ವಿಸ್ತರಣೆಗೆ ಅನುಮೋದನೆ ದೊರೆತಿದ್ದು, ಲೋಕಸಭೆಯಲ್ಲಿ ಅನುಮೋದನೆ ದೊರೆಯುವುದು ಬಾಕಿ ಇದೆ ಎಂದು ತಿಳಿದು ಬಂದಿದೆ.
ಡಿಸೆಂಬರ್ 11, 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಸತ್ ಅನುಮೋದನೆ ನೀಡಿತ್ತು. ಮರುದಿನ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು. ಅದರ ಬೆನ್ನಿಗೇ ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆಗೆ ಇನ್ನೂ ನಿಯಮಗಳನ್ನು ಅಂತಿಮಗೊಳಿಸಬೇಕಿರುವುದರಿಂದ ಕಾಯ್ದೆ ಇನ್ನಷ್ಟೇ ಜಾರಿಯಾಗಬೇಕಿದೆ.
ಸಂಸದೀಯ ಸಮಿತಿಗಳು ತಮ್ಮ ಅಧೀನದಲ್ಲಿರುವ ಕಾಯ್ದೆಗೆ ನಿಯಮಗಳನ್ನು ಅಂತಿಮಗೊಳಿಸುವ ಕಾಲಾವಕಾಶವನ್ನು ವಿಸ್ತರಿಸಲು ಕೇಂದ್ರ ಗೃಹ ಸಚಿವಾಲಯಕ್ಕೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಕ್ರಮವಾಗಿ ಡಿಸೆಂಬರ್ 31, 2022 ಹಾಗೂ ಜನವರಿ 9, 2023ರ ವರೆಗೆ ಅನುಮೋದನೆ ನೀಡಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು, "ನಾವು ಕಾಲಾವಧಿ ವಿಸ್ತರಣೆಗಾಗಿ ಸಂಸದೀಯ ಸಮಿತಿಗಳನ್ನು ಸಂಪರ್ಕಿಸಿದ್ದೆವು. ನಮ್ಮ ಈ ಪ್ರಸ್ತಾವಕ್ಕೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಿದ್ದು, ಲೋಕಸಭೆಯಲ್ಲೂ ಅನುಮೋದನೆ ದೊರೆಯುವ ವಿಶ್ವಾಸವಿದೆ" ಎಂದು ಹೇಳಿದ್ದಾರೆ.
ಸಂಸದೀಯ ನಡವಳಿಕೆ ಕೈಪಿಡಿ ಪ್ರಕಾರ, ಯಾವುದೇ ಕಾಯ್ದೆಗೆ ರಾಷ್ಟ್ರಪತಿ ಅಂಕಿತ ಹಾಕಿದ ಆರು ತಿಂಗಳೊಳಗೆ ನಿಯಮಗಳನ್ನು ಅಂತಿಮಗೊಳಿಸಬೇಕು ಇಲ್ಲವೇ ರಾಜ್ಯಸಭೆ ಮತ್ತು ಲೋಕಸಭೆಯ ಸಂಸದೀಯ ಸಮಿತಿಗಳ ಅಧೀನದಲ್ಲಿರುವ ಕಾಯ್ದೆಗೆ ನಿಯಮ ಅಂತಿಮಗೊಳಿಸುವ ಕಾಲಾವಕಾಶವನ್ನು ವಿಸ್ತರಿಸಲು ಅವುಗಳಿಂದ ಅನುಮೋದನೆ ಪಡೆಯಬೇಕು. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆ ಹೊರಬಿದ್ದ ಆರು ತಿಂಗಳೊಳಗೆ ಅದಕ್ಕೆ ನಿಯಮಗಳನ್ನು ಅಂತಿಮಗೊಳಿಸುವಲ್ಲಿ ಕೇಂದ್ರ ಗೃಹ ಸಚಿವಾಲಯ ವಿಫಲವಾಗಿದ್ದು, ಸಂಸದೀಯ ಸಮಿತಿಗಳಿಂದ ಆರು ಬಾರಿ ಕಾಲಾವಕಾಶ ವಿಸ್ತರಣೆ ಪಡೆದಿತ್ತು. ಈ ಸಂಬಂಧ ಜೂನ್, 2020ರಲ್ಲಿ ಮೊದಲ ವಿಸ್ತರಣೆ ನೀಡಲಾಗಿತ್ತು.