ನವದೆಹಲಿ: ಉತ್ತರಾಖಂಡದ ಜೋಶಿಮಠ ಎಂಬ ಊರಿನಲ್ಲಿ ಉಂಟಾಗುತ್ತಿರುವ ಭೂಕುಸಿತ ಮತ್ತು ಅದರ ಪರಿಣಾಮಗಳ ಕುರಿತು ಕ್ಷಿಪ್ರ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಶುಕ್ರವಾರ ಸಮಿತಿಯನ್ನು ರಚಿಸಿದೆ.
ಪರಿಸರ ಮತ್ತು ಅರಣ್ಯ ಸಚಿವಾಲಯ, ಕೇಂದ್ರ ಜಲ ಆಯೋಗ, ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಗಂಗಾ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯು 'ಜೋಶಿಮಠದ ಭೂಕುಸಿತ, ಅದರ ಪರಿಣಾಮಗಳ ಬಗ್ಗೆ ಕ್ಷಿಪ್ರ ಅಧ್ಯಯನ ನಡೆಸಿ, ಕಾರಣವನ್ನು ಪತ್ತೆ ಮಾಡಿ ಮೂರು ದಿನಗಳಲ್ಲಿ ವರದಿ ನೀಡಲಿದೆ' ಎಂದು ಜಲಶಕ್ತಿ ಸಚಿವಾಲಯ ಹೊರಡಿಸಿದ ಜ್ಞಾಪಕ ಪತ್ರದಲ್ಲಿ ಹೇಳಲಾಗಿದೆ.
ಭೂಮಿ ಕುಸಿತದಿಂದಾಗಿ ಕಟ್ಟಡಗಳು, ಹೆದ್ದಾರಿಗಳು, ಮೂಲಸೌಕರ್ಯ ಮತ್ತು ನದಿ ವ್ಯವಸ್ಥೆಯ ಮೇಲೆ ಆಗುವ ಪರಿಣಾಮಗಳನ್ನು ಸಮಿತಿ ಪರಿಶೀಲಿಸಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಬದರಿನಾಥ, ಹೇಮಕುಂಡ ಸಾಹಿಬ ಮತ್ತು ಔಲಿಯ ಸ್ಕೀಯಿಂಗ್ ತಾಣಗಳಿಗೆ ಜೋಶಿಮಠವು ಹೆಬ್ಬಾಗಿಲು ಎನಿಸಿಕೊಂಡಿದೆ.
ಸೂಕ್ಷ್ಮವಾದ ಬೆಟ್ಟ ಪ್ರದೇಶಗಳಲ್ಲಿ ಬೇಕಾಬಿಟ್ಟಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡಿರುವುದೇ ಜೋಶಿ ಮಠ ಕುಸಿತಕ್ಕೆ ಕಾರಣ ಎನ್ನಲಾಗಿದೆ. ಮಣ್ಣಿನ ಅಡಿಯಿಂದ ನೀರು ಜಿನುಗುತ್ತಿದೆ, ಮೇಲ್ಮಣ್ಣು ಸವೆದು ಹೋಗಿದೆ. ಸ್ಥಳೀಯ ತೊರೆಗಳ ಸಹಜ ಹರಿವಿಗೆ ಮನುಷ್ಯ ನಿರ್ಮಿಸಿರುವ ರಚನೆಗಳು ಅಡ್ಡಿಯಾಗಿವೆ. ಹಾಗಾಗಿ, ತೊರೆಗಳು ಆಗಾಗ ದಿಕ್ಕು ಬದಲಿಸುತ್ತಿವೆ. ಧೌಲಿಗಂಗಾ ಮತ್ತು ಅಲಕನಂದಾ ನದಿಗಳ ಸಂಗಮ ಸ್ಥಾನವಾದ ವಿಷ್ಣುಪ್ರಯಾಗದಿಂದ ಆಗ್ನೇಯಕ್ಕಿರುವ ಇಳಿಜಾರಿನಲ್ಲಿ ಈ ಸಣ್ಣ ಪಟ್ಟಣ ಇದೆ.
ಈ ಪಟ್ಟಣದಲ್ಲಿ ಮಣ್ಣು ಕುಸಿಯುವುದು ಇದು ಮೊದಲೇನೂ ಅಲ್ಲ. ಸುಮಾರು 50 ವರ್ಷಗಳ ಹಿಂದೆಯೇ ಇದು ಜನರ ಅರಿವಿಗೆ ಬಂದಿತ್ತು. 1976ರಲ್ಲಿ ಈ ಕುರಿತು ಅಧ್ಯಯನ ನಡೆಸಲು ಮಿಶ್ರಾ ಸಮಿತಿಯನ್ನು ರಾಜ್ಯ ಸರ್ಕಾರವು ನೇಮಿಸಿತ್ತು. 'ಇಲ್ಲಿನ ಮರಗಳನ್ನು ಮಕ್ಕಳ ರೀತಿಯಲ್ಲಿ ಪೊರೆಯಬೇಕು. ಇಲ್ಲಿನ ಬೆಟ್ಟಗಳಲ್ಲಿ ಇರುವ ಶಿಲೆಗಳನ್ನು ಅಗೆತ ಅಥವಾ ಸ್ಫೋಟದ ಮೂಲಕ ತೆಗೆಯಬಾರದು' ಎಂದು ಸಮಿತಿಯು ಆಗಲೇ ಎಚ್ಚರಿಕೆ ನೀಡಿತ್ತು.
ಆದರೆ ಈ ಎಚ್ಚರಿಕೆಯನ್ನು ಸರ್ಕಾರ ಅಥವಾ ಜನರು ಗಂಭೀರವಾಗಿ ಪರಿಗಣಿಸದ ಪರಿಣಾಮ ಈಗ ಗೋಚರವಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಮನೆಗಳಲ್ಲಿ ಬಿರುಕು ಮೂಡುವುದು ಹೆಚ್ಚಾಗಿದೆ. ಮನೆಗಳು ಅಸ್ಥಿರವಾಗಿವೆ. ಜನರು ಊರು ಬಿಟ್ಟು ಹೋಗುತ್ತಿದ್ದಾರೆ. ತುರ್ತಾಗಿ ಏನನ್ನಾದರೂ ಮಾಡಲೇಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.
2022ರ ಆಗಸ್ಟ್‌ನಲ್ಲಿ ಸರ್ಕಾರವು ವಿವಿಧ ಸಂಸ್ಥೆಗಳ ಪ್ರತಿನಿಧಿಗಳಿರುವ ತಂಡವೊಂದನ್ನು ರಚಿಸಿತ್ತು. ಭೂವೈಜ್ಞಾನಿಕ ಮತ್ತು ಭೂತಾಂತ್ರಿಕ ಸಮೀಕ್ಷೆಯ ಹೊಣೆಯನ್ನು ಈ ಸಮಿತಿಗೆ ವಹಿಸಲಾಗಿತ್ತು. ಕುಸಿತದ ನಿಖರ ಕಾರಣಗಳನ್ನು ಪತ್ತೆ ಮಾಡುವುದು, ಪರಿಹಾರಗಳನ್ನು ಸೂಚಿಸುವುದು ಈ ತಂಡದ ಜವಾಬ್ದಾರಿಯಾಗಿತ್ತು.
ಯೋಜಿತವಲ್ಲದ ಅಭಿವೃದ್ಧಿ ಚಟುವಟಿಕೆಗಳು, ಆಗಾಗ ನಡೆಯುವ ಭೂಕಂಪನಗಳು, ಮಣ್ಣಿನ ಧಾರಣ ಸಾಮರ್ಥ್ಯದ ಅಂದಾಜು ಮಾಡದೇ ನಿರ್ಮಾಣ ಮತ್ತು ಇತರ ಕಾಮಗಾರಿಗಳು ಭೂಕುಸಿತಕ್ಕೆ ಕಾರಣವಾಗಿವೆ ಎಂದು ತಂಡವು ವರದಿಯಲ್ಲಿ ಹೇಳಿತ್ತು.